ಗುಜರಾತ್ನ ಏಕ್ತಾ ನಗರದ ಅಂಗಳದಲ್ಲಿ ಕನ್ನಡಿಗರ ಎದೆ ಉಬ್ಬುವ ಕ್ಷಣವೊಂದು ದಾಖಲಾಗಿದೆ. ಐದು ದಶಕಗಳ ಕಾಲ ತಮ್ಮ ಅಭಿನಯದ ಸೊಬಗಿನಿಂದ ಕೋಟ್ಯಂತರ ಹೃದಯಗಳನ್ನು ಗೆದ್ದ ಕನ್ನಡದ, ನಟ ಶ್ರೇಷ್ಠ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸ್ವೀಕರಿಸಿದ್ರು.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೈಯಿಂದ ಈ ಪ್ರಶಸ್ತಿ ಸ್ವೀಕರಿಸಲು ಅನಂತ್ ನಾಗ್ ವೇದಿಕೆಗೆ ಆಗಮಿಸುತ್ತಿದ್ದಂತೆ ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಗೌರವ ಸಲ್ಲಿಸಿತು. 300ಕ್ಕೂ ಹೆಚ್ಚು ಚಲನಚಿತ್ರಗಳು, ಕಣ್ಣಲ್ಲೇ ಅಭಿನಯಿಸುವ ಅದ್ಭುತ ಕಲೆ ಹಾಗೂ ‘ಮಾಲ್ಗುಡಿ ಡೇಸ್’ ನಂತಹ ಅಮರ ಪಾತ್ರಗಳ ಮೂಲಕ ಭಾರತೀಯ ಬೆಳ್ಳಿಪರದೆಯನ್ನು ಶ್ರೀಮಂತಗೊಳಿಸಿದ ಈ ಮೇರು ನಟನಿಗೆ 2025ರ ಪದ್ಮಭೂಷಣದ ನಂತರ ಈಗ ಸಿಕ್ಕ ಈ ಗೌರವ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಡಿ ಕೆ ಶಿವಕುಮಾರ್, ಸೇರಿದಂತೆ ದೇಶಾದ್ಯಂತ ಗಣ್ಯರು ಈ ಕಲಾ ಸರಸ್ವತಿಯ ಸಾಕಾರ ಮೂರ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ.


