Friday, June 5, 2026
Homeಚಿಕ್ಕಮಗಳೂರುಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿ ಕಳ್ಳತನ: ಕಳ್ಳನಿಗೆ ಸ್ಥಳೀಯರಿಂದ ಧರ್ಮದೇಟು

ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದಲ್ಲಿ ಕಳ್ಳತನ: ಕಳ್ಳನಿಗೆ ಸ್ಥಳೀಯರಿಂದ ಧರ್ಮದೇಟು

- Advertisement -
- Advertisement -

ಚಿಕ್ಕಮಗಳೂರು : ಕಷ್ಟಕಾರ್ಪಣ್ಯಗಳು ದೂರವಾಗಲಿ ಎಂದು ಭಗವಂತನಿಗೆ ಭಕ್ತರು ಹರಿಕೆ ರೂಪದಲ್ಲಿ ಹಣವನ್ನು ಕಾಣಿಕೆ ಡಬ್ಬಕ್ಕೆ ಹಾಕುತ್ತಾರೆ. ಆದ್ರೆ ಕೆಲವರು ಹಣದ ಆಸೆಗೆ ಕಾಣಿಕೆ ಡಬ್ಬಕ್ಕೆ ಕನ್ನ ಹಾಕಿ ಕಳ್ಳತನದ ದಾರಿ ಹಿಡಿಯುತ್ತಾರೆ. ಇಲ್ಲೊಬ್ಬ ಕಳ್ಳ ಕಾಣಿಕೆ ಹಾಕುವ ನೆಪದಲ್ಲಿ ಹಣ ಕದಿಯುವ ವೇಳೆಯಲ್ಲಿ ಸಿಕ್ಕಿಬಿದ್ದು ಸ್ಥಳೀಯರಿಂದ ಪೂಜೆ ಮಾಡಿಸಿಕೊಂಡಿದ್ದಾ‌ನೆ.

ಕಾಣಿಕೆ ಹುಂಡಿ ಹಣವನ್ನ ಎಗರಿಸುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಸಿಗುವ ಇತಿಹಾಸ ಪ್ರಸಿದ್ಧ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರು ಭಯ-ಭಕ್ತಿಯಿಂದ ಪೂಜೆ ಸಲ್ಲಿಸಿ, ಕೈಮುಗಿದು ಹೋಗುವ ಅಣ್ಣಪ್ಪ ಸ್ವಾಮಿ ದೇವಸ್ಥಾದಲ್ಲಿ ಕಾಣಿಕೆ ಹುಂಡಿಯನ್ನ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಪೂಜೆ ಮಾಡಿದ್ದಾರೆ. ದೇವರ ಹಣ ಕದಿಯುವ ವೇಳೆ ಸಿಕ್ಕಿ ಬಿದ್ದು ಮಂಗಳಾರತಿ ಮಾಡಿಸಿಕೊಂಡ ವ್ಯಕ್ತಿಯನ್ನ ಬೇಲೂರು ಮೂಲದವನು ಎಂದು ಗುರುತಿಸಲಾಗಿದೆ.

ದೇವರ ಬಳಿ ಇದ್ದ  ಕಾಣಿಕೆ ಹುಂಡಿಯಿಂದ ಹಣವನ್ನ ಜೇಬಿಗೆ ತುಂಬಿಕೊಂಡಿದ್ದ ಎನ್ನಲಾಗಿದೆ. ಆದರೆ, ಹಲ್ಲೆಗೊಳಗಾದ ವ್ಯಕ್ತಿ ವೀಡಿಯೋದಲ್ಲಿ ಮಾತನಾಡಿದ್ದು, ನಾನು ಹುಂಡಿಗೆ ಒಂದಿಷ್ಟು ಹಣವನ್ನು ಹಾಕಿದ್ದೆ, ಮತ್ತೊಂದಿಷ್ಟು ಹಣವನ್ನ ಹುಂಡಿಗೆ ಹಾಕಲೆಂದು ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಹೇಳಿದ್ದಾನೆ. ಆದರೆ, ಆತ ಹುಂಡಿಯಿಂದ ಹಣವನ್ನ ಜೇಬಿಗೆ ಹಾಕಿಕೊಳ್ಳುತ್ತಿದ್ದ ದೃಶ್ಯವನ್ನ ಕಂಡ ಸ್ಥಳೀಯರು ಆತನಿಗೆ ಧರ್ಮದೇಟು ನೀಡಿದ್ದಾರೆ. ಸುಳ್ಳು ಹೇಳಬೇಡ ಎಂದು ನಾಲ್ಕು ಬಾರಿಸಿದ್ದಾರೆ. ಕೊನೆಗೆ ಆತ ಹೋಗಲಿ ಬಿಡಿ ನನ್ನದೇ ತಪ್ಪು ಎಂದಿದ್ದಾನೆ. ಈ ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಹುಂಡಿ ಹಣ ಕದಿಯುತ್ತಿದ್ದ ವ್ಯಕ್ತಿಗೆ ಧರ್ಮದೇಟು ನೀಡಿದ ಯುವಕರು ಮತ್ತೊಮ್ಮೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

- Advertisement -

Latest News

error: Content is protected !!