ಸಂವಿಧಾನ ಶಿಲ್ಪಿ, ದೇಶದಲ್ಲಿನ ಶೋಷಿತರು, ಮಹಿಳೆಯರು ಹಾಗೂ ಹಿಂದುಳಿದವರ ಬದುಕಿಗೆ ಧ್ವನಿಯಾಗಿ, ಎಲ್ಲರ ಬಾಳಿನ ಬೆಳಕಾಗಿ, ಪತ್ರಿಕೋದ್ಯಮವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯ್ದು ಚೇತನ ಚಿಲುಮೆಯಾದವರು ಡಾ. ಬಿ.ಆರ್ ಅಂಬೇಡ್ಕರ್. ನಾವಿಂದು ಅಂಬೇಡ್ಕರ್ ಅವರ 129 ನೇ ಜನ್ಮ ದಿನಾಚರಣೆ ಆಚರಿಸುವ ಸಡಗರದಲ್ಲಿದ್ದೇವೆ.
ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಅವರು ಸಾಮಾಜಿಕ, ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಭಾರತೀಯ ಮಹಾನ್ ನಾಯಕರಲ್ಲಿ ಅಂಬೇಡ್ಕರ್ ಕೂಡ ಒಬ್ಬರು. ಡಾ. ಬಿ.ಆರ್ ಅಂಬೇಡ್ಕರ್ ಅವರು 1891 ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್‍ನಲ್ಲಿ ರಾಮಜೀ ಮತ್ತು ಭೀಮಬಾಯಿ ಅವರ ಮಗನಾಗಿ ಜನಿಸಿದರು. ಭೀಮರಾವ್ ಇವರ ಜನ್ಮನಾಮವಾಗಿದೆ.
ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ತರ್ಕಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡಿ, ಉನ್ನತ ಸ್ಥಾನ ಅಲಂಕರಿಸಿದ ಇವರು, 1908 ರಲ್ಲಿ ರಮಾಬಾಯಿ ಅವರೊಂದಿಗೆ ಸಪ್ತಪದಿ ತುಳಿದರು.
ಅಸ್ಪೃಶ್ಯತೆ ವಿರುದ್ಧ ಹೋರಾಟ :
1927 ರಿಂದ 1932 ರವರೆಗೆ ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿದ ಇವರು ಅಸ್ಪøಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ-ಬಾವಿಗಳಿಂದ ನೀರು ಸೇದುವ ಹಕ್ಕು ಸೇರಿದಂತೆ ಮುಂತಾದ ವಿಷಯಗಳ ಕುರಿತು ಹೋರಾಡಿದ್ದಾರೆ.
ಸಂವಿಧಾನ ಶಿಲ್ಪಿ :
ಭಾರತ ಸಂವಿಧಾನ ರಚನೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪಾತ್ರ ಅಗಾದವಾದುದು. 2 ವರ್ಷ, 18 ತಿಂಗಳು ಹಾಗೂ 11 ದಿನಗಳ ಸತತ ಪರಿಶ್ರಮದ ಫಲವಾಗಿ 1949 ನವೆಂಬರ್ 26 ರಂದು ಸಂವಿಧಾನದ ಕರಡು ಪ್ರತಿಯನ್ನು ಸಲ್ಲಿಸಲಾಯಿತು. ಪೂರ್ಣ ಸ್ವರಾಜ್ ನೆನಪಿಗಾಗಿ 1950 ಜನವರಿ 26 ರಂದು ಭಾರತದ ಸಂವಿಧಾನ ಅಂಗೀಕರಿಸಲಾಯಿತು. ಬೃಹತ್ ಸಂವಿಧಾನ ರಚಿಸಿ ಸಂವಿಧಾನ ಶಿಲ್ಪಿಯಾದರು.
ಪತ್ರಿಕೋದ್ಯಮದಲ್ಲಿ ಸೇವೆ :
ಮಹಾತ್ಮ ಗಾಂಧಿಜೀಯ ಅವರಂತೆ ಡಾ. ಬಿ.ಆರ್ ಅಂಬೇಡ್ಕರ್‍ರವರು ಸಹ ಪತ್ರಿಕೋದ್ಯಮ ಮತ್ತು ಅದರ ಸಾಹಿತ್ಯ ಒಳಹೊರಗುಗಳನ್ನು ಅರಿತಿದ್ದರು. ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯನ್ನು ತಮ್ಮ ಸುದ್ದಿ ವಿಶ್ಲೇಷಣೆಗಳಲ್ಲಿ ಮಾಡುತ್ತಾ ಬಂದವರು.
ಮೂಕನಾಯಕ, ಬಹಿಷ್ಕೃತ ಭಾರತ, ಸಮತ, ಜನತ, ಪ್ರಬುದ್ಧ ಭಾರತ ಪತ್ರಿಕೆಯಲ್ಲಿ ಅಂಬೇಡ್ಕರ್ ಓರ್ವ ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಅಪಾರವಾದುದು. ಅವರ ಬರವಣಿಗೆಗಳು ಮಾಧ್ಯಮ ಲೋಕದ ಅತ್ಯುತ್ತಮ ನೋಟುಗಳುಳ್ಳ ಇವರ ಚಿಂತನೆ ಯಾವಾಗಲೂ ವಿಭಿನ್ನತೆಯಿಂದ ಪ್ರಖ್ಯಾತಿಯಾಗಿದೆ. ಕ್ರಾಂತಿಕಾರಿ ಪತ್ರಿಕೋದ್ಯಮದ ಭಾಗವೇ ಆಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಧ್ವನಿಯಿಲ್ಲವರಿಗೆ ತಮ್ಮ ಧ್ವನಿಯನ್ನು ಮೀಸಲಿರಿಸಿದ್ದರು. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ತೀರಾ ಕೊನೆಯ ಸಾಲಿನಲ್ಲಿ ಇರುವವರು ಹಾಗೂ ಅಶಕ್ತ ಜನರ ಪರವಾದ ಅವರ ಲೇಖನಗಳು ಪತ್ರಿಕೋದ್ಯಮದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದವು.
1920ರ ಜನವರಿ 31 ರಂದು ಮೂಕ ನಾಯಕ ಎಂಬ ಮರಾಠಿ ಪತ್ರಿಕೆ ಆರಂಭಿಸುವುದರ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ನಂತರ ಬಹಿಷ್ಕೃತ ಭಾರತ ಪತ್ರಿಕೆ ಆರಂಭಿಸಿದರು. ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ಮೂಡಿಸುವ ಉದ್ದೇಶದಿಂದ ‘ಸಮತಾ’ ಎಂಬ ಪಾಕ್ಷಿಕ ಪತ್ರಿಕೆ ಹೊರತರುತ್ತಾರೆ. ಸಮತಾ ಪತ್ರಿಕೆ ‘ಜನತಾ’ ಪತ್ರಿಕೆಯಾಗಿ ನಂತರ 1954 ರಲ್ಲಿ ‘ಪ್ರಬುದ್ಧ ಭಾರತ’ ವಾರಪತ್ರಿಕೆಯಾಗಿ ರೂಪತಾಳಿತು.
ಪತ್ರಿಕೋದ್ಯಮ ಮತ್ತು ಸಾಹಿತ್ಯಕ್ಕೆ ಮಿಂಚುಬಳ್ಳಿಯಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅಶಕ್ತರ ಪರವಾಗಿದ್ದರು. ಇವರು ಕತ್ತಿ ಹಿಡಿದವರಲ್ಲ ಆದರೆ ಇವರಿಂದ ಕತ್ತಿಗಿಂತ ಹರಿತವಾದ ಲೇಖನ ಝಳಪಿಸಿದವರು. ಇವರ ಲೇಖನಗಳು ಧ್ವನಿಯಿಲ್ಲದವರ ಧ್ವನಿಯಾಗಿ, ಅಸ್ತಿತ್ವಯಿಲ್ಲದವರ ಅಸ್ತಿತ್ವವಾಗಿ ಸದಾ ತುಳಿತಕ್ಕೊಳಗಾದವರ ಪರವಾಗಿದ್ದವು.
‘ಎಲ್ಲಿಯವರೆಗೆ ಮಾಧ್ಯಮದಲ್ಲಿ ಪ್ರತಿಯೊಂದು ಜನಾಂಗದ ಸರಿಯಾದ ಸಹಭಾಗಿತ್ವ ಇರುವುದಿಲ್ಲವೋ ಅಲ್ಲಿಯವರೆಗೆ ಪತ್ರಿಕೋದ್ಯಮ ಕೂಡ ಪಕ್ಷಪಾತ ವಹಿಸುತ್ತಲೇ ಇರುತ್ತದೆ’ ಎಂಬ ಅಂಬೇಡ್ಕರ್ ಮಾತು ಪತ್ರಿಕೋದ್ಯಮದಲ್ಲಿ ಸಾರ್ವಜನಿಕರ ಸಹಭಾಗಿತ್ವ ಕುರಿತು ಸಾರಿ ಹೇಳುತ್ತದೆ.