ಕಾರ್ಕಳ; ಹಿಂದೂಗಳು ಶಬರಿ ಮಾಲೆ ಯಾತ್ರೆ ಮಾಡೋದು ಸಾಮಾನ್ಯ. ಆದರೆ ಅನ್ಯಧರ್ಮದವರು ಕೂಡ ಅಯ್ಯಪ್ಪನನ್ನು ಆರಾಧಿಸ್ತಾರೆ ಎಂದರೆ ಅಚ್ಚರಿಯಾಗುತ್ತಲ್ವಾ..ಆದರೆ ಇಲ್ಲೂಬ್ಬ ಅಪ್ಪಟ ಅಯ್ಯಪ್ಪನ ಭಕ್ತರಿದ್ದಾರೆ. ಕಳೆದ 18 ವರ್ಷಗಳಿಂದ ಅಯ್ಯಪ್ಪನನ್ನು ಆರಾಧಿಸುತ್ತಿದ್ದಾರೆ. ಈ ಬಾರಿ 18ನೇ ಬಾರಿಗೆ ಅವರು ಶಬರಿಮಲೆ ಯಾತ್ರೆ ಮಾಡುತ್ತಿದ್ದಾರೆ. ಅಂದ್ಹಾಗೆ ಅವರ ಹೆಸರು ಅಜಿತ್ ಸೆರಾವೋ.
ಅಜಿತ್ ಸೆರಾವೋ ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ನಿವಾಸಿ. ದಿ| ವಿಲಿಯಂ ಸೆರಾವೋ, ದುಲ್ಟಿನ್ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಒಬ್ಬರಾದ ಅಜಿತ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್. ಮೊದಲಿಗೆ 18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಿದ್ದರು. ಕೊರೊನಾ ಸಂದರ್ಭ ದಲ್ಲೂ ಅಯ್ಯಪ್ಪನ ದರ್ಶನ ತಪ್ಪಿಸಲಿಲ್ಲ. ಅಜಿತ್ ಹಿಂದಿನ 17 ವರ್ಷಗಳಲ್ಲಿ 5 ಬಾರಿ ದಟ್ಟ ಕಾನನ ದಾರಿಯಲ್ಲಿ ಸಾಗಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ತಂದೆ ತೀರಿಕೊಂಡ ವರ್ಷ ಮಾಲೆ ಧರಿಸಿರಲಿಲ್ಲ.
ತನ್ನ ಈ ಪುಣ್ಯ ಕಾರ್ಯಕ್ಕೆ ಮನೆಯವರು, ನೆರೆಹೊರೆಯವರು ಸಹಿತ ಎಲ್ಲ ಧರ್ಮದವರ ಬೆಂಬಲವಿದೆ. ಅಯ್ಯಪ್ಪನ ಮೇಲಿನ ಅಚಲ ವಿಶ್ವಾಸ ನನ್ನದು. ವ್ರತ ನಿಷ್ಠರಾಗಿ, ವ್ಯಸನ ಮುಕ್ತನಾಗಿ ಬದುಕಲು ಈ ಅಯ್ಯಪ್ಪಮಾಲೆ ಪೂರಕ ಸಹಕಾರಿ ಎಂದು ಖುಷಿಯಿಂದ ಹೇಳ್ತಾರೆ ಅಜಿತ್ ಸೆರಾವೋ.