ಸುಳ್ಯ, ಎ.12: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಿಂದ ನಡೆದುಕೊಂಡೇ ಗೂನಡ್ಕ ತಲುಪಿದ ಅನಾರೋಗ್ಯಪೀಡಿತ ಮಡಿಕೇರಿಯ ವ್ಯಕ್ತಿಯೋರ್ವ ಮನೆ ತಲುಪಿದ್ದಾರೆ. ಅಚ್ಚರಿಯೇನೆಂದರೆ 20 ವರ್ಷಗಳ ಹಿಂದೆ ಮನೆ ತೊರೆದಿದ್ದ ಈ ವ್ಯಕ್ತಿ ಮತ್ತೆ ಮನೆಗೆ ಮರಳಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೈನ್ ಗೇಟ್‌ನಲ್ಲಿ ವಾಸವಿರುವ ತಮ್ಮಯ್ಯ ಹಾಗೂ ಶಿವಮ್ಮ ದಂಪತಿಯ ಒಬ್ಬನೇ ಮಗ ಕೇಶವ ಈ ರೀತಿ ಮನೆ ಸೇರಿದ ಯುವಕ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಕೇಶವ ಅಲ್ಲಿಂದ ಡಿಸ್ಚಾರ್ಜ್ ಆಗಿ ನಡೆದುಕೊಂಡೇ ಗೂನಡ್ಕ ತಲುಪಿದ್ದಾರೆ.
ಗೂನಡ್ಕ ಬಸ್ ನಿಲ್ದಾಣದಲ್ಲಿ ಅಸಹಾಯಕನಾಗಿ ಕುಳಿತಿದ್ದ ಕೇಶವರನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೇಶವ ನೀಡಿದ ಅಪೂರ್ಣ ಮಾಹಿತಿಯನ್ನು ಆಧರಿಸಿ ಅವರ ಮನೆ ಹುಡುಕಲು ಮುಂದಾದರು. ಲಾಕ್‌ಡೌನ್ ಮಧ್ಯೆಯೇ ಪೊಲೀಸರ ಅನುಮತಿ ಪಡೆದು ಕೇಶವರನ್ನು ಮನೆ ತಲುಪಿಸುವಲ್ಲಿ ಯಶಸ್ವಿಯಾದರು.
ಇಪ್ಪತ್ತು ವರ್ಷಗಳ ಹಿಂದೆ ಮನೆಬಿಟ್ಟಿದ್ದ ಮಗ ಅಚಾನಕ್ ಮನೆಗೆ ಆಗಮಿಸಿರುವುದನ್ನು ಕಂಡ ಸಂಭ್ರಮಿಸಿದ ಕೇಶವರ ಹೆತ್ತವರು ಮನದಾಳದ ಕೃತಜ್ಞತೆ ಸಲ್ಲಿಸಿದರು.