ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನ ಪನ್ನೆ ಬಳಿಯ ಸುಮಾರು 70 ವರ್ಷದ ಅಜ್ಜಿಯೊಬ್ಬರು ವಾಹನ ಸಿಗದೆ ಔಷಧಿಗಾಗಿ ಸುಮಾರು 16 ಕಿ.ಮೀ. ದೂರದ ಗುತ್ತಿಗಾರಿಗೆ ಕಾಲ್ನಡಿಗೆಯಲ್ಲೇ ಬಂದ ಮನಕಲಕುವ ಘಟನೆ ನಡೆದಿದೆ.
70 ವರ್ಷದ ಗಂಗಮ್ಮ ಎಂಬ ಅಜ್ಜಿ ಕಲ್ಮಕಾರಿನ ಮೆಡಿಕಲ್‌ನಲ್ಲಿ ಔಷಧ ಸಿಗದೇ ಇದ್ದುದರಿಂದ ಗುತ್ತಿಗಾರಿಗೆ ಹೋಗಬೇಕಾಯಿತು. ಆದರೆ ಲಾಕ್‌ಡೌನ್ ಕಾರಣ ಯಾವುದೇ ವಾಹನ ಸಿಗದಿದ್ದುದರಿಂದ ಸುಮಾರು 16 ಕಿ.ಮೀ. ದೂರವನ್ನು ನಡೆದುಕೊಂಡೇ ತೆರಳಿ ತನಗೆ ಬೇಕಾದ ಔಷಧ ಪಡೆದುಕೊಂಡರು.
ವಿಶೇಷವೆಂದರೆ ಅಜ್ಜಿ ನಡೆದುಕೊಂಡು ಬಂದ 16 ಕಿ.ಮೀಟರ್ ದೂರ ಕೂಡ ದಟ್ಟವಾದ ಕಾಡು ಪ್ರದೇಶವಾಗಿದೆ. ಸಾಮಾನ್ಯ ದಿನಗಳಲ್ಲಿ ಕೂಡ ಇಲ್ಲಿ ಬೆರಳೆನಿಕೆಯ ವಾಹನಗಳು ಓಡಾಡುತ್ತವೆ. ಗಂಟೆಗೆ 1 ರಂತೆ ಸರ್ವಿಸ್ ಬಸ್, ವ್ಯಾನ್ ಗಳು ಓಡಾಡುವ ಪ್ರದೇಶವಾಗಿದೆ.
ಗುತ್ತಿಗಾರಿನ ಮೆಡಿಕಲ್ ನಲ್ಲಿ ಔಷಧ ಪಡೆದುಕೊಂಡ ಬಳಿಕ ಮರಳಿ ಗಂಗಮ್ಮ ತನ್ನೂರಿಗೆ ಹೊರಟಾಗ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರ ಕಣ್ಣಿಗೆ ಬಿದ್ದರು. ವಿಷಯ ತಿಳಿದ ಗುತ್ತಿಗಾರಿನ ಕೊರೊನಾ ತುರ್ತು ಕಾರ್ಯಪಡೆಯು ಆಟೋರಿಕ್ಷಾ ಗೊತ್ತುಪಡಿಸಿ ಅವರನ್ನು ಊರಿಗೆ ಕಳುಹಿಸಿ ಕೊಟ್ಟರು. ಈ ಮೂಲಕ ಗುತ್ತಿಗಾರು ಗ್ರಾಪಂ ಅಧ್ಯಕ್ಷರು ಮತ್ತು ತುರ್ತು ಕಾರ್ಯಪಡೆ ಮಾನವೀಯತೆ ಮೆರೆಯಿತು.