ಬೆಂಗಳೂರು: ಇಡೀ ವಿಶ್ವಕ್ಕೆ ಹೋಲಿಸಿದಲ್ಲಿ ದೇಶದಲ್ಲಿ ಕೋವಿಡ್-19 ಪೀಡಿತರ ಪ್ರಮಾಣ ಕಡಿಮೆ. ಕರೊನಾ ನಿಯಂತ್ರಿಸುವಲ್ಲಿ ದೇಶ ಕೈಗೊಂಡ ಕ್ರಮಗಳು ಮೆಚ್ಚುಗೆಗೂ ಪಾತ್ರವಾಗಿವೆ. ಅಂತೆಯೇ, ಭಾರತದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ಕೂಡ ಕರೊನಾ ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಅಪಾರ ಶ್ರಮವಹಿಸುತ್ತಿದೆ. ಇಷ್ಟು ದಿನಗಳ ಶ್ರಮ ಫಲ ನೀಡಿದೆಯೇ ಎಂಬಂತೆ ದೇಶದಲ್ಲಿ ಕರೊನದ ಸರಾಸರಿ ಬೆಳವಣಿಗೆಯನ್ನು ಗಮನಿಸುವುದಾದರೆ ಕರ್ನಾಟಕ 19ನೇ ಸ್ಥಾನದಲ್ಲಿದೆ. ಆರಂಭದಲ್ಲಿ ಮೂರನೇ ಸ್ಥಾನದಲ್ಲಿದ್ದ ರಾಜ್ಯ ಈಗ 19ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ಐದು ದಿನಗಳಲ್ಲಿ ಹೆಚ್ಚಾಗಿರುವ ಕರೊನಾ ಸೋಂಕಿತರ ಸರಾಸರಿ ಲೆಕ್ಕ ಹಾಕಿದರೆ ರಾಜ್ಯದಲ್ಲಿ ಇದರ ಪ್ರಮಾಣ ಕೇವಲ ಶೇ.4.7 ಆಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮಾಹಿತಿ ನೀಡಿದ್ದಾರೆ. ಬೆಳವಣಿಗೆ ದರ ಕುಸಿತವಾಗಿರುವುದು ಆಶಾದಾಯಕ ಬೆಳವಣಿಗೆ ಎಂದು ಅತೀಕ್ ತಿಳಿಸಿದ್ದಾರೆ.
ಜಾರ್ಖಂಡ್ನಲ್ಲಿ ಕರೊನಾ ಪೀಡಿತರ ಸಂಖ್ಯೆಯಲ್ಲಿ ಅತಿ ಹೆಚ್ಚು ಬೆಳವಣಿಗೆ ಕಂಡು ಬಂದಿದೆ. ಶೇ.45.4 ಹೆಚ್ಚಳವಾಗಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಹರ್ಯಾಣಾದಲ್ಲಿ ಶೇ.28, ಹಿಮಾಚಲಪ್ರದೇಶದಲ್ಲಿ ಶೇ.24.6, ಮಹಾರಾಷ್ಟ್ರ- ಶೇ.22.7, ಮಧ್ಯಪ್ರದೇಶ-ಶೇ.20, ರಾಜಸ್ಥಾನ- ಶೇ.18.3, ಗುಜರಾತ್-ಶೇ.18.1, ಒಡಿಶಾ-ಶೇ.17.1, ಆಂಧ್ರಪ್ರದೇಶ-ಶೇ.16.7, ಉತ್ತರಪ್ರದೇಶದಲ್ಲಿ ಶೇ.12.6 ಬೆಳವಣಿಗೆಯಾಗಿದೆ. ಈ ರಾಜ್ಯಗಳು ಕ್ರಮವಾಗಿ ಮೊದಲ 10 ಸ್ಥಾನಗಳಲ್ಲಿವೆ.
ಅರುಣಾಚಲಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರ, ಪುದುಚೇರಿ, ಗೋವಾ ಹಾಗೂ ಚಂಡಿಗಢದಲ್ಲಿ ಕಲೆದ ಐದು ದಿನಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಅಂಕ-ಅಂಶಗಳನ್ನು ತಿಳಿಸಿದೆ.
ದಕ್ಷಿಣದ ರಾಜ್ಯಗಳಲ್ಲಿ ಕೇರಳ ಕೂಡ ಕರೊನಾ ನಿಯಂತ್ರಣದಲ್ಲಿ ಹಿಡಿತ ಸಾಧಿಸಿದ್ದು, ಇಲ್ಲಿನ ಬೆಳವಣಿಗೆ ಪ್ರಮಾಣ ಶೇ.3.1 ಆಗಿದೆ. ತಮಿಳುನಾಡಿನಲ್ಲಿ ಶೇ.11.5, ತೆಲಂಗಾಣದಲ್ಲಿ ಶೇ.10.4 ಆಗಿದೆ ಎಂದು ವರದಿಯಾಗಿದೆ.