ಮಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಿನಿಮೀಯ ಶೈಲಿಯಲ್ಲಿ ವಸತಿ ಸಮುಚ್ಚಯಕ್ಕೆ ಕರೆದೊಯ್ಯುತ್ತಿರುವಾಗ ಸಿಕ್ಕಿ ಬಿದ್ದ ಘಟನೆ ಭಾನುವಾರ ನಡೆದಿದೆ.
ನಗರದ ಆರ್ಯಸಮಾಜ ರಸ್ತೆಯಲ್ಲಿರುವ ವಸತಿ ಸಮುಚ್ಚಯದಲ್ಲಿ ವಿದ್ಯಾರ್ಥಿಯೊಬ್ಬ ಬಾಡಿಗೆಗೆ ವಾಸವಾಗಿದ್ದ. ವಸತಿ ಸಮುಚ್ಚಯ ಅಸೋಸಿಯೇಷನ್ ಲಾಕ್ ಡೌನ್ ಹಿನ್ನಲೆಯಲ್ಲಿ ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಣೆ ಮಾಡಿತ್ತು.
ವಿದ್ಯಾರ್ಥಿಯೊಬ್ಬ ‘ತಾನು ಒಂಟಿಯಾಗಿದ್ದು, ತನ್ನ ಗೆಳೆಯನನ್ನು ರೂಮಿಗೆ ಕರೆದುಕೊಂಡು ಬರುತ್ತೇನೆ’ ಎಂದು ಹೇಳುತ್ತಿದ್ದ. ಇದಕ್ಕೆ ವಸತಿ ಸಮುಚ್ಚಯ ಅಸೋಸಿಯೇಷನ್ ಅನುಮತಿ ನೀಡಿರಲಿಲ್ಲ. ಆದರೂ ಹಠ ಬಿಡದ ಯುವಕ ಭಾನುವಾರ ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾನೆ.
ಈ ವೇಳೆ ಸೂಟ್ ಕೇಸ್ ನಲ್ಲಿ ಸಂಚಲನ ಕಂಡು ಬಂದಿದ್ದು, ವಸತಿ ಸಮುಚ್ಚಯದಲ್ಲಿರುವ ಇತರರ ಗಮನಕ್ಕೆ ಬಂದಿದೆ. ಕೂಡಲೇ ಎಲ್ಲರೂ ಸೇರಿ ಸೂಟ್ ಕೇಸ್ ತೆರೆಯುವಂತೆ ಒತ್ತಾಯಿಸಿದ್ದಾರೆ. ಸಂದಿಗ್ಧ ಸ್ಥಿತಿಗೆ ಸಿಲುಕಿದ ಯುವಕ ಸೂಟ್ ಕೇಸ್ ತೆರೆಯುವಾಗ ಸತ್ಯಾಂಶ ಬಹಿರಂಗವಾಗಿದೆ.
ಕೂಡಲೇ ಈ ವಿಷಯವನ್ನು ಕದ್ರಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ಕದ್ರಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಮುಚ್ಚಳಿಕೆ ಕರೆಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ಮಂಗಳೂರು: ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕರೆದೊಯ್ದ!
- Advertisement -
- Advertisement -
- Advertisement -