Tuesday, April 30, 2024
Homeಅಪರಾಧವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಆ್ಯಸಿಡ್ ಒದಗಿಸಿದವರನ್ನು ವಶಕ್ಕೆ ಪಡೆದ ಪೊಲೀಸರು

ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಆ್ಯಸಿಡ್ ಒದಗಿಸಿದವರನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ಕಡಬ: ಮಾ. 4ರಂದು ಬೆಳಗ್ಗೆ ಕಡಬ ಸರಕಾರಿ ಪ.ಪೂ. ಕಾಲೇಜಿನ ಆವರಣದಲ್ಲಿ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದ ತನ್ನ ಪ್ರೇಯಸಿ ಸೇರಿದಂತೆ ಮೂವರು ವಿದ್ಯಾರ್ಥಿನಿಯರ ಮೇಲೆ ಪ್ರೀತಿ ನಿರಾಕರಣೆಯ ಆಕ್ರೋಶದಿಂದ ಆ್ಯಸಿಡ್ ಎರಚಿ ಗಾಯಗೊಳಿಸಿದ ಆರೋಪಿಗೆ ಆ್ಯಸಿಡ್ ಒದಗಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ತನಿಖೆಯ ವೇಳೆ ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕು ವಾಯಿಕಡವು ಗ್ರಾಮದ ಅಡಕ್ಕರ ನಿವಾಸಿ ಅಬಿನ್ ಸಿಬಿ (22) ತನ್ನ ಊರಿನಿಂದ ರೈಲಿನ ಮೂಲಕ ತಮಿಳುನಾಡಿನ ಕೊಯಮತ್ತೂರಿಗೆ ತೆರಳಿ ಆ್ಯಸಿಡ್ ಖರೀದಿಸಿ ತಂದಿರುವುದು ಬಯಲಾಗಿತ್ತು. ಘಟನೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದರು.

ಪೊಲೀಸರು ಕಡಬದಲ್ಲಿ ಘಟನೆ ನಡೆದಿದ್ದ ಕಾಲೇಜಿಗೆ, ಮೊಬೈಲ್ ಚಾರ್ಜ್‌ಗೆ ಇರಿಸಿದ್ದ ಬೇಕರಿಗೆ, ಬಟ್ಟೆ ಬದಲಾಯಿಸಿದ್ದ ಜಾಗಕ್ಕೆ ಸೇರಿದಂತೆ ಆರೋಪಿ ಸಂಚರಿಸಿದ್ದ ಇನ್ನಿತರ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ದು ವಿಸ್ತೃತ ತನಿಖೆ ನಡೆಸಿದ್ದರು. ಅಷ್ಟೇಅಲ್ಲದೆ ಪೊಲೀಸರು ಹೆಚ್ಚಿನ ತನಿಖೆಗಾಗಿ ಕೇರಳ ಹಾಗೂ ತಮಿಳುನಾಡಿಗೆ ಕರೆದೊಯ್ದಿದ್ದರು. ತಮಿಳುನಾಡಿನಲ್ಲಿ ಆರೋಪಿಗೆ ಆ್ಯಸಿಡ್ ನೀಡಿದ್ದ ಅಂಗಡಿಯ ಮಾಲಕ ಹಾಗೂ ಇನ್ನೋರ್ವನನ್ನು ಕಡಬಕ್ಕೆ ಕರೆತಂದಿರುವ ಪೊಲೀಸರು ಅವರಿಂದ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗೆ ನ್ಯಾಯಾಂಗ ಬಂಧನ; ಆರೋಪಿ ಅಬಿನ್ ಸಿಬಿಯನ್ನು ನ್ಯಾಯಾಲಯದ ಮೂಲಕ ಕಸ್ಟಡಿಗೆ ಪಡೆದಿದ್ದ ಪೊಲೀಸರು ವಿಸ್ಕೃತ ತನಿಖೆ ನಡೆಸಿ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಯ ಬ್ಯಾಗಿನಲ್ಲಿತ್ತು ಬುರ್ಖಾ, ಚೂರಿ!; ಕೇರಳದಿಂದ ರೈಲಿನಲ್ಲಿ ಮಾ. 3ರಂದು ರಾತ್ರಿ ಮಂಗಳೂರಿಗೆ ಬಂದಿಳಿದಿದ್ದ ಆರೋಪಿ ಅಬಿನ್ ಸಿಬಿ ರೈಲು ನಿಲ್ದಾಣದಲ್ಲಿಯೇ ರಾತ್ರಿ ಕಳೆದು ಮರುದಿನ ಮುಂಜಾನೆ ಬಸ್ ಹತ್ತಿ ಕಡಬಕ್ಕೆ ಬಂದು ತಲುಪಿದ್ದ. ಕಾಲೇಜಿನ ವರಾಂಡದಲ್ಲಿ ಪರೀಕ್ಷೆ ಬರೆಯಲು ಸಿದ್ಧರಾಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಲೆತ್ನಿಸಿದಾಗ ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆತನ ಬ್ಯಾಗನ್ನು ಪರಿಶೀಲಿಸಿದಾಗ ಒಂದು ಬುರ್ಖಾ ಹಾಗೂ ಚೂರಿ ಪತ್ತೆಯಾಗಿತ್ತು. ಒಂದು ವೇಳೆ ಆ್ಯಸಿಡ್ ದಾಳಿ ನಡೆಸಲು ಸಾಧ್ಯವಾಗದಿದ್ದರೆ ಆತ ತನ್ನ ಗುರಿಯಾಗಿದ್ದ ವಿದ್ಯಾರ್ಥಿನಿಯ ಮೇಲೆ ಚೂರಿಯಿಂದ ದಾಳಿ ಮಾಡುವ ಸಾಧ್ಯತೆಗಳಿತ್ತು ಹಾಗೂ ಘಟನೆಯ ಬಳಿಕ ತನ್ನ ಗುರುತು ಸಿಗದಂತೆ ಬುರ್ಖಾ ಧರಿಸಿ ಪರಾರಿಯಾಗುವ ಉದ್ದೇಶದಿಂದ ಬುರ್ಖಾ ತಂದಿರಬಹುದು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

- Advertisement -
spot_img

Latest News

error: Content is protected !!