ಬಂಟ್ವಾಳ; ನ್ಯಾನೋ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬಂಟ್ವಾಳ ಪಿಲಾತಬೆಟ್ಟು ಕಟ್ಟೆಮನೆ ಎಂಬಲ್ಲಿ ದಿನಾಂಕ 29.12.2025 ರಂದು ಮಧ್ಯಾಹ್ನ ನಡೆದಿದೆ. ಇಮ್ರಾನ್ @ ಎಸ್ ಎ ಮೊಹಮ್ಮದ್ ತಾಹ ಮೃತರು.
ದಕ್ಷಿಣ ಕನ್ನಡ ಜಿಲ್ಲಾ ಡಿ.ಸಿ.ಆರ್.ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದ ನ್ಯಾನೋ ಕಾರು ಹಾಗೂ ಇಮ್ರಾನ್ @ ಎಸ್ ಎ ಮೊಹಮ್ಮದ್ ತಾಹ ಎಂಬವರು ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತವಾಗಿದ್ದು, ಅಪಘಾತದಲ್ಲಿ ಬೈಕ್ ಸವಾರ ಇಮ್ರಾನ್ @ ಎಸ್ ಎ ಮೊಹಮ್ಮದ್ ತಾಹ ರವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ನಡೆಯುವ ವೇಳೆ ಕಾರು ಚಾಲನೆ ಮಾಡುತ್ತಿದ್ದ ಪ್ರಸನ್ನರವರು ಮದ್ಯಪಾನ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರವಾಗುತ್ತಿತ್ತು. ಈ ಬಗ್ಗೆ ಖಚಿತತೆಗಾಗಿ ಪುಂಜಾಲಕಟ್ಟೆ ಠಾಣಾ ಪೊಲೀಸ್ ಉಪನಿರೀಕ್ಷಕರು ಪ್ರಸನ್ನ ಅವರನ್ನು ಮದ್ಯಪಾನ ಮಾಡಿರುವ ಬಗ್ಗೆ ಪರಿಶೀಲಿಸಲು ಆಲ್ಕೋಮೀಟರ್ ಪರೀಕ್ಷೆ ನಡೆಸಿದ್ದು, ಈ ವೇಳೆ ಆತನು ಮದ್ಯಪಾನ ಮಾಡಿರುವುದು ದೃಢಪಟ್ಟಿರುವುದಿಲ್ಲ. ಮೃತವ್ಯಕ್ತಿಯ ಸಂಬಂಧಿಕರು ಹಾಗೂ ಘಟನೆಯ ಬಗ್ಗೆ ವಿಡಿಯೋ/ಆಡಿಯೋ ಪ್ರಸಾರ ಮಾಡಿದ ಮಹಿಳೆಯ ಸಮ್ಮಖದಲ್ಲೂ ಪ್ರಸನ್ನ ಅವರ ಅಲ್ಕೋಮೀಟರ್ ಪರೀಕ್ಷೆ ನಡೆಸಲಾಗಿದ್ದು, ಮದ್ಯಪಾನ ಮಾಡಿರುವುದು ದೃಢಪಟ್ಟಿರುವುದಿಲ್ಲ.ಅಲ್ಲದೇ ಆರೋಪಿಯು ಮದ್ಯಪಾನ ಮಾಡಿರುವ ಬಗ್ಗೆ ಹೆಚ್ಚಿನ ಖಚಿತತೆಗಾಗಿ ಆರೋಪಿಯ ರಕ್ತಪರೀಕ್ಷೆಯನ್ನೂ ನಡೆಸಲಾಗುವುದು ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂ ಪೊಲೀಸರು ತಿಳಿಸಿದ್ದಾರೆ.


