ಮಂಗಳೂರು: ಉಳ್ಳಾಲದ ಸೋಮೇಶ್ವರ ಮೂಲದ ಯುವಕನೋರ್ವ ಒಮನ್ ನಲ್ಲಿ ಉದ್ಯೋಗದಲ್ಲಿದ್ದು, ಪ್ರೀತಿ ವೈಫಲ್ಯದಿಂದ ಆತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತಪಟ್ಟ ದುರ್ದೈವಿಯನ್ನು ಉಳ್ಳಾಲದ ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಹಿರಿಯ ಪುತ್ರ ಪುನೀತ್ ಪೂಜಾರಿ (32) ಎನ್ನಲಾಗಿದೆ.
ಪುನೀತ್ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದು ಇತ್ತೀಚಿಗೆ 1 ವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ಮರಳಿದ್ದರು. ಇದೀಗ ತನ್ನ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣದ ವಿವರ: ಮಂಗಳೂರಿನ ಉರ್ವಾ ಮೂಲದ ಯುವತಿಯನ್ನು ಕಳೆದ ನಾಲ್ಕು ವರ್ಷಗಳಿಂದ ಪುನೀತ್ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಇತ್ತೀಚಿನ ದಿನಗಳಲ್ಲಿ ಯುವತಿಯು ಪುನೀತ್ ಅವರ ಕರೆ ಹಾಗೂ ಸಂದೇಶಗಳಿಗೆ ಸ್ಪಂದಿಸದೆ ಪ್ರೀತಿಯನ್ನು ನಿರಾಕರಿಸಿದ್ದರು ಎನ್ನಲಾಗಿದೆ. ಪ್ರೀತಿ ನಿರಾಕರಣೆಯಿಂದ ಮನನೊಂದಿದ್ದ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿ, ತನ್ನ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಪುನೀತ್ ಮೃತದೇಹವನ್ನು ಭಾರತಕ್ಕೆ ತರಲು ವಿಳಂಬವಾಗಬಹುದು ಎಂದು ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಸದ್ಯ ಇರುವ ಅಶಾಂತ ಪರಿಸ್ಥಿತಿಯಿಂದಾಗಿ ಒಮಾನ್‌ನ ಕಾನೂನು ಪ್ರಕ್ರಿಯೆಗಳಿಗೆ ಹೆಚ್ಚಿನ ಸಮಯ ತಗುಲುವ ಸಾಧ್ಯತೆಯಿದ ಎನ್ನಲಾಗಿದೆ.


