Monday, May 6, 2024
Homeತಾಜಾ ಸುದ್ದಿಹೀಗೊಬ್ಬ ಪರೋಪಕಾರಿ: 600 ಕೋಟಿ ರೂ.ಆಸ್ತಿ ಸರ್ಕಾರಕ್ಕೆ ದಾನ ಮಾಡಿದ ಉದ್ಯಮಿ

ಹೀಗೊಬ್ಬ ಪರೋಪಕಾರಿ: 600 ಕೋಟಿ ರೂ.ಆಸ್ತಿ ಸರ್ಕಾರಕ್ಕೆ ದಾನ ಮಾಡಿದ ಉದ್ಯಮಿ

spot_img
- Advertisement -
- Advertisement -

ಲಖನೌ: ಮೊರದಾಬಾದ್‌ನ ಉದ್ಯಮಿಯೊಬ್ಬರು ತಮ್ಮ ಇಡೀ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ದಾನ ಮಾಡಿದ್ದಾರೆ. ಬಡವರಿಗೆ ಸಹಾಯ ಮಾಡುವ ಸಲುವಾಗಿ ಅವರು ಈ ಮಹತ್ಕಾರ್ಯ ಕೈಗೊಂಡಿದ್ದಾರೆ. ವೈದ್ಯ ಅರವಿಂದ್ ಗೋಯಲ್ ಅವರ ಈ ಪರೋಪಕಾರಿ ಮನೋಭಾವಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ಸುಮಾರು 50 ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿರುವ ಅರವಿಂದ್ ಗೋಯಲ್ ಅವರು, ಅಂದಾಜು 600 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಎಲ್ಲ ಸಂಪತ್ತನ್ನೂ ಅವರು ದಾನ ಮಾಡಿದ್ದಾರೆ. ಈ ನಿರ್ಧಾರವನ್ನು 25 ವರ್ಷಗಳಷ್ಟು ಹಿಂದೆಯೇ ತೆಗೆದುಕೊಂಡಿದ್ದಾಗಿ ಅವರು ಆಸ್ತಿ ದಾನ ಮಾಡಿದ ಬಳಿಕ ತಿಳಿಸಿದ್ದಾರೆ.

ಕೊರೊನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಗೋಯಲ್ ಅವರು ಮೊರದಾಬಾದ್‌ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸಿದ್ದರು. ಅವರು ರಾಜ್ಯದಲ್ಲಿನ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಗೆ ಕೂಡ ವ್ಯವಸ್ಥೆ ಕಲ್ಪಿಸಿದ್ದರು. ತಮ್ಮ 50 ವರ್ಷಗಳ ಉದ್ಯಮ ಬದುಕಿನಲ್ಲಿ ಬೃಹತ್ ಸಾಮ್ರಾಜ್ಯವನ್ನೇ ಅವರು ನಿರ್ಮಿಸಿದ್ದರು. ಆದರೆ ಈಗ ಅವರು ಮೊರದಾಬಾದ್ ಸಿವಿಲ್ ಲೈನ್ಸ್‌ನಲ್ಲಿನ ಮನೆಯನ್ನು ಮಾತ್ರ ಉಳಿಸಿಕೊಳ್ಳಲಿದ್ದಾರೆ. ರಾಜ್ಯ ಸರ್ಕಾರವು ಬಡಬಗ್ಗರಿಗೆ ಸಹಾಯ ಮಾಡಲು ತಮ್ಮ ಆಸ್ತಿಯನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಅವರು ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮಗಳು ಮತ್ತು ಆಸ್ಪತ್ರೆಗಳ ಟ್ರಸ್ಟಿಯಾಗಿದ್ದಾರೆ.

ಗೋಯಲ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರಿಂದ ಒಟ್ಟು ನಾಲ್ಕು ಬಾರಿ ಗೌರವ ಪಡೆದಿದ್ದರು. ಗೋಯಲ್ ಅವರು ಪತ್ನಿ ರೇಣು ಗೋಯಲ್ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳನ್ನು ಹೊಂದಿದ್ದಾರೆ. ಅವರ ಹಿರಿ ಮಗ ಮಧುರ್ ಗೋಯಲ್ ಅವರು ಮುಂಬಯಿಯಲ್ಲಿ ವಾಸಿಸುತ್ತಿದ್ದಾರೆ. ಎರಡನೇ ಮಗ ಶುಭಂ ಪ್ರಕಾಶ್ ಗೋಯಲ್ ಅವರು ತಂದೆಯ ಜತೆ ಮೊರದಾಬಾದ್‌ನಲ್ಲಿ ನೆಲೆಸಿದ್ದು, ಅವರ ಉದ್ಯಮಕ್ಕೆ ಸಹಾಯ ಮಾಡುತ್ತಿದ್ದಾರೆ. ಮಗಳು ಮದುವೆ ಬಳಿಕ ಬರೇಲಿಯಲ್ಲಿ ನೆಲೆಸಿದ್ದಾರೆ. ಆಸ್ತಿ ದಾನದ ಅವರ ನಿರ್ಧಾರಕ್ಕೆ ಅವರ ಕುಟುಂಬವೂ ಬೆಂಬಲವಾಗಿದೆ.

ಅವರ ಆಸ್ತಿಯ ಒಟ್ಟು ಮೌಲ್ಯವನ್ನು ನಿರ್ಧರಿಸಲು ಉತ್ತರ ಪ್ರದೇಶ ಸರ್ಕಾರ ಐವರು ಸದಸ್ಯರ ಸಮಿತಿಯನ್ನು ರಚಿಸಲಿದೆ. ಇದಕ್ಕೆ ಗೋಯಲ್ ಅವರೇ ಸ್ವತಃ ಮೂವರನ್ನು ನಾಮನಿರ್ದೇಶನ ಮಾಡಲಿದ್ದಾರೆ. ಆಸ್ತಿಗಳ ಮಾರಾಟದಿಂದ ಬರುವ ಹಣವನ್ನು ಅನಾಥರು ಹಾಗೂ ನಿರ್ಗತಿಕರ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ ಬಳಸಲಾಗುತ್ತದೆ.

- Advertisement -
spot_img

Latest News

error: Content is protected !!