
ಬೆಳ್ತಂಗಡಿ; ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ಸಂಜಯನಗರ ನಿವಾಸಿ, ನಿವೃತ್ತ ಸರಕಾರಿ ಉದ್ಯೋಗಿ ಪಿ.ಕೆ ಅಬ್ದುಲ್ ರಹಿಮಾನ್ (70) ಗಾಯಗೊಂಡವರು.
ಚಿಕ್ಕಮಗಳೂರು ವಿಜಯಪುರ ನಿವಾಸಿ ಸುಲ್ತಾನ್ ಮೊಹ್ಯುದ್ದೀನ್ ಜೀಲಾನಿ ಎಂಬವರು ಅವಸರದಿಂದ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಅವರಿಗೆ ಗುದ್ದಿದ ಪರಿಣಾಮ ಅಬ್ದುಲ್ ರಹಿಮಾನ್ ಅವರ ಭುಜ ಮತ್ತು ಎಡದ ಕಾಲಿನ ಮೂಳೆ ಮುರಿದಿದೆ. ತಲೆ ಮತ್ತು ದೇಹದ ಇತರ ಭಾಗಗಳಿಗೂ ಗಾಯವಾಗಿದೆ.

ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಶಸ್ರ್ತಚಿಕಿತ್ಸೆ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಅವರ ಅಳಿಯ ಅಶ್ರಫ್ ಆಲಿಕುಂಞಿ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಬಾಡಿಗೆ ಮನೆಯಲ್ಲಿ ನೆಲೆಸಿರುವ ಇವರಿಗೆ ವಿಕಲಾಂಗನಾಗಿರುವ ಓರ್ವ ಗಂಡು ಮಗ ಮಾತ್ರ ಇದ್ದಾನೆ. ಬಹಳ ಆರ್ಥಿಕ ತಾಪತ್ರಯಗಳೂ ಇದೆ. ಅವರ ಮಗಳಿಗೆ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.


