ಮುಂಬೈ: ಕೋವಿಡ್-19 ರೋಗದಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಸಿಬ್ಬಂದಿಗೆ ಸಹೋದ್ಯೋಗಿಗಳು ಆತ್ಮೀಯ ಸ್ವಾಗತ ನೀಡಿದ್ದಾರೆ.
ಕರ್ತವ್ಯದಲ್ಲಿದ್ದಾಗ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮುಂಬೈ ಪೊಲೀಸ್ ಸಿಬ್ಬಂದಿ ಆಂಬುಲೆನ್ಸ್ ಏರುವ ಸಂದರ್ಭದಲ್ಲಿ “ಸ್ನೇಹಿತರೆ ಚಿಂತಿಸಬೇಡಿ. ನಾನು ಬೇಗ ಗುಣಮುಖನಾಗಿ ಕರ್ತವ್ಯಕ್ಕೆ ಮರಳುತ್ತೇನೆ” ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈಗ ಅದೇ ಸಿಬ್ಬಂದಿ ಗುಣಮುಖನಾಗಿದ್ದು, ಸಹೋದ್ಯೋಗಿಗಳು ಅವರಿಗೆ ಚಪ್ಪಾಳೆ ತಟ್ಟಿ ಸ್ವಾಗತಿಸುವ ವಿಡಿಯೋವನ್ನು ಮುಂಬೈ ಪೊಲೀಸ್ “ವೆಲ್ ಕಮ್ ಬ್ಯಾಕ್ ಹಿರೋ” ಎಂಬ ಟ್ಯಾಗ್ ಲೈನ್ ನೊಂದಿಗೆ ಟ್ವೀಟರ್ ನಲ್ಲಿ ಅಪ್ ಲೋಡ್ ಮಾಡಿದೆ. ಆ ಹೃದಯಸ್ಪರ್ಶಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. 3.4 ಲಕ್ಷ ಜನ ವೀಕ್ಷಿಸಿದ್ದು, 18,100 ಜನ ಲೈಕ್ ಮಾಡಿದ್ದಾರೆ. 2600 ಜನ ರೀಟ್ವೀಟ್ ಮಾಡಿದ್ದಾರೆ.
“ರೋಗದ ವಿರುದ್ಧ ಹೋರಾಡಲು ನೀವು ಎಷ್ಟು ಅವಶ್ಯ ಎಂಬುದನ್ನು ವಿಡಿಯೋ ತೋರಿಸುತ್ತದೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, “ಅಂಥ ಒತ್ತಡದ ಸನ್ನಿವೇಶ ಎದುರಿಸಿದರೂ ಕರ್ತವ್ಯಕ್ಕೆ ಮರಳಿದ ನಂತರ ಪೊಲೀಸ್ ಸಿಬ್ಬಂದಿ ತನ್ನ ಹಿರಿಯ ಅಧಿಕಾರಿಗಳಿಗೆ ಗೌರವ ನೀಡುವ ರೀತಿ ನನಗೆ ಇಷ್ಟವಾಯಿತು” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.