ಉಡುಪಿ : ಉಡುಪಿ ಜಿಲ್ಲೆಯ ಎಲ್ಲ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಸದುಪಯೋಗದ ಬಗ್ಗೆ ಅರಿವು ಮೂಡಿಸಿ. ಈ ಕಾರ್ಡ್ ಮೂಲಕ ಪಡೆಯಬಹುದಾದ ಸೌಲಭ್ಯಗಳನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಅರ್ಹ ರೈತರಿಗೆ ಆದ್ಯತೆಯಲ್ಲಿ ವಿತರಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ‘ಕಿಸಾನ್ ಭಾಗೀದಾರಿ ಪ್ರಾಥಮಿಕ ಹಮಾರಿ’ ವಿಶೇಷ ಕಾರ್ಯಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಹೇಳಿದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು 1,60,000ರೂ.ವರೆಗೆ ಯಾವುದೇ ಗ್ಯಾರಂಟಿ ನೀಡದೇ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿದೆ. ಇದರಿಂದ ಇತರೆ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಲೇವಾದೇವಿಗಾರ ರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೊಂದರೆಗೀಡಾಗುವುದು ತಪ್ಪುತ್ತದೆ. ರೈತರನ್ನು ಕಿಸಾನ್ ಕಾರ್ಡ್ ಯೋಜನೆಗೆ ನೋಂದಣಿ ಮಾಡಲು ಏಪ್ರಿಲ್ 24 ರಿಂದ ಮೇ 1ರವರೆಗೆ ನಡೆಯುವ ಬೃಹತ್ ಆಂದೋಲನದಲ್ಲಿ ಜಿಲ್ಲೆಯ ಎಲ್ಲಾ ರೈತರನ್ನು ಈ ಯೋಜನೆಯಡಿ ನೋಂದಣಿ ಮಾಡಿ, ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.