ಸುಳ್ಯ: ಮಹಿಳೆಯೊಬ್ಬರಿಗೆ ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿದ ಅಪರಿಚಿತರು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಈ ಬಗ್ಗೆ ಉಡುಪಿ ಸೈಬರ್ ಕ್ರೈಮ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ 24 ವರ್ಷದ ಪೂರ್ಣಿಮಾ ಎಂಬವರ ವಾಟ್ಸ್ಆ್ಯಪ್ ಗೆ ತನ್ನ ಮಗನಿಗೆ ಚಿಕಿತ್ಸೆ ನೀಡಬೇಕಾಗಿರುವುದರಿಂದ ಹಣದ ತೊಂದರೆ ಇದೆ, ಹಣ ಸಹಾಯ ಮಾಡಬೇಕಾಗಿ ಅಪರಿಚಿತರು ಸಂದೇಶ ಕಳುಹಿಸಿ, ಫೋನ್ ಪೇ ಮೂಲಕ 5,೦೦೦.ರೂ ಪೂರ್ಣಿಮಾ ಖಾತೆಗೆ ಕಳುಹಿಸಿದ್ದರು. ಇದನ್ನು ನಂಬಿ ತಾನು 5,೦೦೦ ರೂಪಾಯಿ ಹಣವನ್ನು ಸೇರಿಸಿ ಅಪರಿಚಿತರು ಕಳಿಸಿರುವ ಖಾತೆಗೆ ಒಟ್ಟು 10,೦೦೦ರೂ. ಹಣವನ್ನು ಸೆ.18 ರಂದು ಕಳುಹಿಸಿದ್ದರು.
ನಂತರ ಸಪ್ಟೆಂಬರ್ ತಿಂಗಳ ಕೊನೆಯಲ್ಲಿ ಅಪರಿಚಿತ ವ್ಯಕ್ತಿಗಳು ಪೂರ್ಣಿಮಾಗೆ ವಿದೇಶದಲ್ಲಿ ಉದ್ಯೋಗ ಹಾಗೂ ಗಿಫ್ಟ್ ನೀಡುವುತ್ತೇವೆಎಂದು ಆಕೆಯನ್ನು ನಂಬಿಸಿ ಅವರಿಂದ ಒಟ್ಟು 4,31,500ರೂ. ಹಣವನ್ನು ತೆಗೆದುಕೊಂಡು, ಇತ್ತ ಹಣವನ್ನು ವಾಪಾಸು ನೀಡದೆ ಅತ್ತ ಕೆಲಸವನ್ನೂ ಕೊಡಿಸದೆ ಮೋಸ ಮಾಡಿದ್ದಾರೆ.
ಪೂರ್ಣಿಮಾಗೆ ಕರೆಮಾಡಿ ನಂಬಿಸಿ ಮೋಸ ಮಾಡಿ ಹಣ ಲೂಟಿ ಮಾಡಿದ ಆರೋಪಿಗಳ ವಿರುದ್ಧ ಮತ್ತು ಇವರ ಖಾತೆಗೆ ಹಣ ಹಾಕಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.