
ಮಂಗಳೂರು: ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸುನೀಲ್ ಕುಮಾರ್ ಅಲಿಯಾಸ್ ಕೌಟಿ, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಶಿಕ್ಷೆಗೆ ಒಳಗಾದ ದೋಷಿಗಳು.
ಪ್ರಕರಣದ ಹಿನ್ನೆಲೆ:
ದಿನಾಂಕ 03/01/2019 ರಂದು ಪಂಜಿಮೊಗರು ಮಾಲಾಡಿ ರಸ್ತೆಯ M.V. ಶೆಟ್ಟಿ ಕಾಲೇಜ್ ಬಳಿ, ಸುನೀಲ್ ಕುಮಾರ್ ತನ್ನ ತಂಗಿಯನ್ನು ರಾಕೇಶ್ ಎಂಬಾತ ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಉಳಿದ ಆರೋಪಿಗಳೊಂದಿಗೆ ಸೇರಿ ತಲವಾರಿನಿಂದ ದಾಳಿ ನಡೆಸಿ ಆತನನ್ನು ಕೊಲೆ ಮಾಡಿದ್ದನು. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ (ಅ.ಕ್ರ 02/2019) ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯ್ಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಶಿಕ್ಷೆಯ ವಿವರ:
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀ ರಾಜೇಶ್ ಮಾರುತಿ ಕಮಟೆ ಅವರು ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದ್ದಾರೆ.
- 1 ರಿಂದ 3 ನೇ ಆರೋಪಿಗಳಿಗೆ ಐ.ಪಿ.ಸಿ ಕಲಂ 302, 120(ಬಿ) ರಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 15,000 ರೂ. ದಂಡ ವಿಧಿಸಲಾಗಿದೆ (ದಂಡ ತೆರಲು ತಪ್ಪಿದರೆ 1 ವರ್ಷ ಹೆಚ್ಚುವರಿ ಶಿಕ್ಷೆ).
- 1 ರಿಂದ 4 ನೇ ಆರೋಪಿಗಳಿಗೆ ಕಲಂ 201 ರಡಿ 3 ವರ್ಷ ಕಾರಾವಾಸ ಹಾಗೂ ತಲಾ 5,000 ರೂ. ದಂಡ ವಿಧಿಸಲಾಗಿದೆ.
- 4ನೇ ಆರೋಪಿಗೆ ಕಲಂ 212 ರಡಿ 3 ವರ್ಷ ಕಾರಾವಾಸ ಮತ್ತು 5,000 ರೂ. ದಂಡ ವಿಧಿಸಲಾಗಿದೆ.
ಆರೋಪಿಗಳಿಗೆ ವಿಧಿಸಲಾದ ಒಟ್ಟು 70,000 ರೂ. ದಂಡದ ಮೊತ್ತದಲ್ಲಿ 50,000 ರೂ.ಗಳನ್ನು ಮೃತ ರಾಕೇಶ್ನ ತಂದೆಗೆ ಪರಿಹಾರವಾಗಿ ನೀಡಲು ಹಾಗೂ 20,000 ರೂ.ಗಳನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಶ್ರೀ ಮೋತೀಲಾಲ್ ಚೌದರಿ ವಾದ ಮಂಡಿಸಿದ್ದರು.


