Thursday, October 29, 2026
Homeಕರಾವಳಿಮಂಗಳೂರುಮಂಗಳೂರು: ಬಸ್ ಇಳಿದ ವ್ಯಕ್ತಿಯ ಅಪಹರಣ; ₹1.15 ಕೋಟಿ ನಗದು, 2 ಮೊಬೈಲ್ ದರೋಡೆ

ಮಂಗಳೂರು: ಬಸ್ ಇಳಿದ ವ್ಯಕ್ತಿಯ ಅಪಹರಣ; ₹1.15 ಕೋಟಿ ನಗದು, 2 ಮೊಬೈಲ್ ದರೋಡೆ

- Advertisement -
- Advertisement -

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ, ₹1.15 ಕೋಟಿ ನಗದು ಹಣ ಹಾಗೂ 2 ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದಾವಣಗೆರೆಯಿಂದ ಮಂಗಳೂರಿಗೆ ಕೋಟ್ಯಂತರ ರೂಪಾಯಿ ಹಣದ ಬ್ಯಾಗ್ ಹೊತ್ತು ತಂದಿದ್ದ ಶಿವಮೊಗ್ಗ ಮೂಲದ ಸತ್ಯನಾರಾಯಣ ಎಂಬವರು ನೀಡಿದ ದೂರಿನ ಮೇರೆಗೆ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆಯ ವಿವರ:

ಮಾಲೀಕರ ಸೂಚನೆಯಂತೆ ಸತ್ಯನಾರಾಯಣ ಅವರು ಅಕ್ಟೋಬರ್ 28 ರಂದು ಬೆಳಿಗ್ಗೆ 6:00 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಬಸ್ಸಿನಿಂದ ಇಳಿದಿದ್ದರು. ಅವರು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಮುಖ ಮುಚ್ಚಿಕೊಂಡಿದ್ದ ನಾಲ್ವರು ದುಷ್ಕರ್ಮಿಗಳು ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ.

ನಗರದಾದ್ಯಂತ 2 ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿದ ಖದೀಮರು, ಅವರ ಬಳಿಯಿದ್ದ ₹1.15 ಕೋಟಿ ನಗದಿದ್ದ 2 ಬ್ಯಾಗ್‌ಗಳು ಹಾಗೂ 2 ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಕಾವೂರು ಬಸ್ ಸ್ಟ್ಯಾಂಡ್ ಸಮೀಪದ ನಿರ್ಜನ ಗುಡ್ಡದ ಮೇಲೆ ಸಂತ್ರಸ್ತನನ್ನು ತಳ್ಳಿ, ದೂರು ನೀಡಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ಕಲಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

- Advertisement -

Latest News

error: Content is protected !!