ಶಿರ್ವ : ಸೌದಿಯಲ್ಲಿ ಸಾಫ್ಟ್ ವೇರ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಶಿರ್ವದಲ್ಲಿ ನಡೆದಿದೆ.
ಶಿರ್ವ ನೆಕ್ಕರೆ ನಿವಾಸಿ ಸೈಮನ್ ಡಿಸೋಜ (57 ) ಮೃತ ವ್ಯಕ್ತಿ. ಸೈಮನ್ ಅವರು ಸೋಮವಾರ ಸಂಜೆ ತಮ್ಮ ಮನೆಯ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌದಿಯಲ್ಲಿ ಸುಮಾರು 25 ವರ್ಷಗಳ ಕಾಲ ಸಾಫ್ಟ್ ವೇರ್ ಉದ್ಯಮಿಯಾಗಿದ್ದ ಅವರು ವಿದೇಶದಿಂದ ಬಂದ ಬಳಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಪಾಂಬೂರು ಮಾನಸ ಪುನರ್ವಸತಿ ಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಹಾಗೂ ಕೇಂದ್ರದ ಉನ್ನತಿಗಾಗಿ ಶ್ರಮಿಸಿದ್ದರು.
ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದು ಬಂದಿಲ್ಲ. ಉಡುಪಿ ಅಗ್ನಿಶಾಮಕ ದಳ ಶವವನ್ನು ಬಾವಿಯಿಂದ ಹೊರಗೆ ತೆಗೆದಿದ್ದು,ಈ ಕುರಿತು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೃತರು ತಾಯಿ, ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.


