ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಮುಗಟಗೇರಿ ಗ್ರಾಮದ ಕಾಫಿ ತೋಟದ ಲೈನ್‌ಮನೆಯಲ್ಲಿ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದರಿಂದ 6 ಮಂದಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೋಜ ಎಂಬಾತ ಮದ್ಯ ಸೇವಿಸಿ ಬಂದು ಎರವರ ಮಂಜು ಎನ್ನುವವರ ಮನೆ ಬಾಗಿಲು ಹಾಕಿ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಮನೆಯೊಳಗೆ ನಿದ್ರಿಸುತ್ತಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ.
ಒಟ್ಟು ಎಂಟು ಜನರ ಪೈಕಿ ಮೂವರು ಸಜೀವ ದಹನವಾಗಿದ್ದು, ಮೂವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಬೇಬಿ(45), ಸೀತೆ(40), ಪ್ರಾರ್ಥನಾ(6) ಸಜೀವ ದಹನವಾಗಿದ್ದು, ವಿಶ್ವಾಸ್(3), ವಿಶ್ವಾಸ್(6), ಪ್ರಕಾಶ್(7) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾಗ್ಯ (40) ಪಾಚೆ (60) ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೋಜ ಮತ್ತು ಅವರ ಪತ್ನಿಯ ನಡುವೆ ಮದ್ಯದ ಅಮಲಿನಲ್ಲಿ ಶುಕ್ರವಾರ ರಾತ್ರಿ ಜಗಳ ನಡೆದಿದೆ. ಬಳಿಕ ಮಧ್ಯರಾತ್ರಿ ಬೋಜ ಲೈನ್‌ಮನೆಯ ಮೇಲೆ ಹತ್ತಿ ಪೆಟ್ರೋಲ್ ಅನ್ನು ಮನೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದರಿಂದ ಆರು ಮಂದಿ ಸಜೀವ ದಹನವಾಗಿದ್ದಾರೆ. ಲೈನ್ ಮನೆಯಲ್ಲಿ ಎಂಟು ಮಂದಿ ನಿದ್ರಿಸುತ್ತಿದ್ದರು. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


