ಬೆಂಗಳೂರು: ಎಟಿಎಂ ಗೆ ತುಂಬಬೇಕಿದ್ದ 64 ಲಕ್ಷ ರೂ. ಹಣದೊಂದಿಗೆ ಎಸ್ಕೇಪ್ ಆಗಿದ್ದ ಚಾಲಕನನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಮಂಡ್ಯ ಮೂಲದ ಯೋಗೀಶ್ ಎಂದು ಗುರುತಿಸಲಾಗಿದೆ. ಈತ ಕಳೆದ ನಾಲ್ಕು ವರ್ಷಗಳಿಂದ ಸೆಕ್ಯೂಲರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎರಡು ವಾರಗಳ ಹಿಂದೆ ಗನ್ ಮ್ಯಾನ್ ಮತ್ತು ಮ್ಯಾನೇಜರ್ ಎಟಿಎಂಗೆ ದುಡ್ಡು ಹಾಕಲು ಒಳಗೆ ಹೋಗಿದ್ದಾಗ ಹೊರಗಡೆ ಇದ್ದ 64 ಲಕ್ಷ ರೂ. ಹಣ ಮತ್ತು ಪ್ರಿಯತಮೆ ಜೊತೆ ಯೋಗೀಶ್ ಪರಾರಿಯಾಗಿದ್ದ.
ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಯೋಗೀಶ್, ಪತಿಯಿಂದ ದೂರವಾಗಿದ್ದ ಅತ್ತೆಯ ಮಗಳನ್ನು ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಹೆಂಡತಿಯನ್ನು ತೊರೆದು ಪ್ರಿಯತಮೆ ಜತೆ ಪ್ರತ್ಯೇಕ ಸಂಸಾರ ನಡೆಸಲು ಹಣವನ್ನು ಕದ್ದಿರುವುದು ಪೊಲೀಸರ ತನಿಖೆಯಿಂದ ಬಯಲುಗೊಂಡಿದೆ.
ಆದರೆ, ಮೈಸೂರಿನಲ್ಲಿ ಸ್ನೇಹಿತರ ಜತೆ ಸಂಪರ್ಕದಲ್ಲಿದ್ದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ. ಯೋಗೇಶ್ ಬಂಧನ ಬಳಿಕ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಕಳ್ಳತನ ಮಾಡಿದ್ದ 64 ಲಕ್ಷದಲ್ಲಿ ಆತನ ಬಳಿಯಿದ್ದದ್ದು ಕೇವಲ 15 ಸಾವಿರ ರೂ. ಮಾತ್ರ. ಉಳಿದ ಹಣ ಎಲ್ಲಿ ಅಂದರೆ ಆರೋಪಿ ಬಾಯಿ ಬಿಡುತ್ತಿಲ್ಲ. ಸದ್ಯ ಯೋಗೇಶ್ನನ್ನು ಬಂಧಿಸಿ ಕರೆತಂದಿರುವ ಸುಬ್ರಮಣ್ಯ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.