ಬೆಂಗಳೂರು: ಗಂಡ ಬೇಡ ಪ್ರಿಯಕರನೇ ಬೇಕು ಅಂತಾ ಪ್ರಿಯಕರನನ್ನು ನಂಬಿ ಆತನ ಹಿಂದೆ ನವವಿವಾಹಿತೆಯೊಬ್ಬಳ ಪಾಡು ಬದುಕಿದೆಯೇ ಬಡ ಜೀವ ಎನ್ನುವಂತಾಗಿದೆ.
ಹೌದು..ಪ್ರಿಯಕರನ ಮಾತನ್ನು ನಂಬಿ ಗಂಡನ ಮನೆಯನ್ನ ಬಿಟ್ಟು ಬಂದ ನವವಿವಾಹಿತೆಯನ್ನ ಪ್ರಿಯಕರನೇ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಎ.ರಂಗನಾಥಪುರ ಗ್ರಾಮದಲ್ಲಿ ನಡೆದಿದೆ. ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ ನವವಿವಾಹಿತೆ ಅಮೃತಾ ಪಾಳು ಬಾವಿಯಿಂದ ರಕ್ಷಣೆ ಮಾಡಲಾಗಿದೆ.
ಕಳೆದ ಶನಿವಾರದಂದು ಗಂಡನ ಮನೆ ಸೊಣ್ಣಹಳ್ಳಿ ಗ್ರಾಮದಿಂದ ನವವಿವಾಹಿತೆ ಅಮೃತಾ ನಾಪತ್ತೆಯಾಗಿದ್ದಳು. ಅಂದು ನಾಪತ್ತೆಯಾಗಿದ್ದ ಅಮೃತಾಳನ್ನ ಗಂಡನ ಮನೆ ಕಡೆಯವರು ಹುಡುಕಾಟವನ್ನು ನಡೆಸಿದ್ದರು. ಆದ್ರೆ ಅಮೃತಾಳನ್ನ ರಂಗನಾಥಪುರದಲ್ಲಿದ್ದ ಪ್ರಿಯಕರ ಆದರ್ಶ ಎಂಬಾತನು ಕರೆಸಿಕೊಂಡಿದ್ದ ಎನ್ನಲಾಗಿದೆ. ಶನಿವಾರವೇ ಕರೆಸಿಕೊಂಡಿದ್ದ ಪ್ರಿಯಕರ ಆಕೆಯನ್ನ 1೦೦ ಅಡಿ ಆಳದ ಪಾಳು ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದಾನೆ.
ಇನ್ನೂ ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲೆ ಬಿದ್ದಿದ್ದ ಅಮೃತಾ ಮೇಲೆ ಬರಲು ಹಾಗದೇ ಕಾಪಾಡಿ ಅಂತಾ ಕೂಗಿಕೊಂಡಿದ್ದಾಳೆ. ಆದ್ರೆ ಯಾರೊಬ್ಬರು ಸಹಾಯಕ್ಕೆ ಬಾರದೇ, ಬಾವಿಯಿಂದ ನಿರಂತರ ಕೂಗಾಟದ ಶಬ್ದ ಕೇಳಿದ ಅಕ್ಕಪಕ್ಕದ ತೋಟದವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವಿಜಯಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ನವವಿವಾಹಿತೆಯನ್ನ ರಕ್ಷಣೆ ಮಾಡಿದ್ದಾರೆ. ಇನ್ನೂ ಅಸ್ವಸ್ಥವಾಗಿರುವ ಅಮೃತಾಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿಯನ್ನ ಪಡೆದಿರುವ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.


