
ನವದೆಹಲಿ:ಇಲ್ಲಿನ ಆದರ್ಶ್ ನಗರದಲ್ಲಿ 18 ವರ್ಷದ ಅಹುಲ್ ರಜಪೂತ್ ಎಂಬಾತ ಮುಸ್ಲಿಂ ಸಮುದಾಯಕ್ಕೆ ಸೇರಿದ ಹುಡುಗಿಯನ್ನು ಪ್ರೀತಿಸಿದ್ದ. ದೆಹಲಿ ವಿಶ್ವವಿದ್ಯಾಲಯದ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ ಅಹುಲ್ ರಜಪೂತ್ ನನ್ನು ಐದು ಮಂದಿ ಮುಸ್ಲಿಂ ಯುವಕರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೊಹಮ್ಮದ್ ಅಫ್ರೋಲ್, ಮೊಹಮ್ಮದ್ ರಾಜ್ ಸೇರಿದಂತೆ ಐವರು ಹಲ್ಲೆ ಮಾಡುತ್ತಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ಅಹುಲ್ ತನ್ನ ಮನೆಯ ಸಮೀಪ ಇರುವ ಯುವತಿಯ ಜತೆ ಸ್ನೇಹ ಬೆಳೆಸಿದ್ದ. ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.ನಿನ್ನೆ ಇಬ್ಬರೂ ಒಟ್ಟಿಗೇ ಇರುವುದನ್ನು ಕುಟುಂಬಸ್ಥರು ನೋಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ನಾಲ್ಕೈದು ಮಂದಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.
ಹಲ್ಲೆಗೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆತ ಅದಾಗಲೇ ಮೃತಪಟ್ಟ ಎಂದು ಆತನ ಚಿಕ್ಕಪ್ಪ ಹೇಳಿದ್ದಾರೆ. ಘಟನೆಯನ್ನು ಖಂಡಿಸಿರುವ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 10 ಲಕ್ಷ ರೂಪಾಯಿ ಪರಿಹಾರವನ್ನು ಯುವಕನ ಕುಟುಂಬಕ್ಕೆ ಘೋಷಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.


