Thursday, November 26, 2026
Homeಕರಾವಳಿಮಂಗಳೂರುಟೀ ಶರ್ಟ್ ಖರೀದಿಸಿದರೆ ಐಫೋನ್ ಗಿಫ್ಟ್ ಆಮಿಷ: 1.65 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ಯುವಕ!

ಟೀ ಶರ್ಟ್ ಖರೀದಿಸಿದರೆ ಐಫೋನ್ ಗಿಫ್ಟ್ ಆಮಿಷ: 1.65 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ಯುವಕ!

- Advertisement -
- Advertisement -

ಮಂಗಳೂರು: ಆನ್‌ಲೈನ್‌ನಲ್ಲಿ ಕೇವಲ 734 ರೂ. ಬೆಲೆಯ ಟೀ ಶರ್ಟ್ ಖರೀದಿಸಿದರೆ ದುಬಾರಿ ಐಫೋನ್ ಉಚಿತವಾಗಿ ಸಿಗಲಿದೆ ಎಂಬ ಜಾಹೀರಾತನ್ನು ನಂಬಿದ ಯುವಕನೊಬ್ಬ ಬರೋಬ್ಬರಿ 1,65,402 ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಟೋಬರ್ 31ರಂದು ಯುವಕ ತನ್ನ ಮೊಬೈಲ್‌ನಲ್ಲಿ ‘ಇಂಡಿಯಾ ಸ್ಟೋರ್ ಫಾರ್ ಯು’ (India Store For You) ಎಂಬ ವೆಬ್‌ಸೈಟ್ ವೀಕ್ಷಿಸುತ್ತಿದ್ದಾಗ, ಒಂದು ಟೀ ಶರ್ಟ್ ಖರೀದಿಸಿದರೆ ಐಫೋನ್ ಉಡುಗೊರೆಯಾಗಿ ನೀಡುವುದಾಗಿ ಜಾಹೀರಾತು ಕಾಣಿಸಿಕೊಂಡಿತ್ತು. ಇದಕ್ಕೆ ಆಕರ್ಷಿತನಾದ ಯುವಕ, ಫೋನ್‌ಪೇ ಮೂಲಕ 734 ರೂ. ಪಾವತಿಸಿ ಟೀ ಶರ್ಟ್ ಬುಕ್ ಮಾಡಿದ್ದಾನೆ.

ಅದೇ ದಿನ ಮಧ್ಯಾಹ್ನ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ಟೀ ಶರ್ಟ್ ಜೊತೆಗೆ ಐಫೋನ್ ಕೂಡ ರವಾನೆಯಾಗುತ್ತಿದೆ. ಆದರೆ, ಐಫೋನ್‌ಗೆ ಇನ್ಸೂರೆನ್ಸ್ ಹಣ ಪಾವತಿಸಬೇಕು, ಬಳಿಕ ಆ ಹಣ ನಿಮ್ಮ ಖಾತೆಗೆ ಮರಳಿ ಜಮೆಯಾಗಲಿದೆ ಎಂದು ನಂಬಿಸಿದ್ದಾನೆ. ಇದನ್ನು ನಿಜವೆಂದು ಭಾವಿಸಿದ ಯುವಕ 72,640 ರೂ. ವರ್ಗಾಯಿಸಿದ್ದಾನೆ.

ನಂತರ ನವೆಂಬರ್ 22ರಂದು ಮತ್ತೊಂದು ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವಂಚಕ, 71,906 ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಇದಾದ ಬಳಿಕ, ಯುವಕ ಪಾವತಿಸಿದ ಎಲ್ಲಾ ಹಣವನ್ನು ಐಎಂಪಿಎಸ್ (IMPS) ಮೂಲಕ ವಾಪಸ್ ಕಳುಹಿಸಲು ಕಮಿಷನ್ ಶುಲ್ಕ ಎಂದು ಹೇಳಿ ಪುನಃ 20,856 ರೂ. ವಸೂಲಿ ಮಾಡಿದ್ದಾನೆ.

ಇಷ್ಟೆಲ್ಲಾ ಹಣ ಪಾವತಿಸಿದರೂ ಖಾತೆಗೆ ಯಾವುದೇ ಹಣ ವಾಪಸ್ ಬಾರದಿದ್ದಾಗ ಹಾಗೂ ಐಫೋನ್ ಕೂಡ ಕೈಸೇರದಿದ್ದಾಗ ತಾನು ಮೋಸ ಹೋಗಿರುವುದು ಯುವಕನ ಅರಿವಿಗೆ ಬಂದಿದೆ. ಈ ಸಂಬಂಧ ಯುವಕ ಮಂಗಳೂರು ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!