ಕಡಬ;ಆಟೋ ಬಾಡಿಗೆ ಮಾಡಿಕೊಂಡು ತೆರಳಿದ್ದ ಹೊರರಾಜ್ಯದ ಕಾರ್ಮಿಕರು ಚಾಲಕನ ಮೇಲೆ ಹಲ್ಲೆ ನಡೆಸಿ, ಹಣ ಹಾಗೂ ಮೊಬೈಲ್ ದೋಚಿರುವ ಘಟನೆ ಕಡಬ ತಾಲೂಕಿನಲ್ಲಿ ನವೆಂಬರ್ 4 ರ ತಡರಾತ್ರಿ ಸಂಭವಿಸಿದೆ.ಹಲ್ಲೆಗೊಳಗಾದ ಆಟೋ ಚಾಲಕ ಕೃಷ್ಣ ಅವರನ್ನು ತಕ್ಷಣವೇ ಕಡಬದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ನೂಜಿಬಾಳ್ತಿಲ ಮರಳು ರಾಂಪ್ ಇರುವ ಕುರಿಯಾಳಕೊಪ್ಪಕ್ಕೆ ಹೊರರಾಜ್ಯದ ಕಾರ್ಮಿಕರು ಕೃಷ್ಣ ಅವರ ಆಟೋರಿಕ್ಷಾವನ್ನು ಬಾಡಿಗೆಗೆ ಗೊತ್ತುಮಾಡಿಕೊಂಡು ತೆರಳಿದ್ದರು. ಪ್ರಯಾಣ ಮುಗಿದ ಬಳಿಕ ಆಟೋ ಬಾಡಿಗೆ ಹಣವನ್ನು ನೀಡದೆ, ಆತನ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ರೊಕ್ಕವನ್ನು ಕಸಿದುಕೊಂಡು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ಕೃಷ್ಣ ಆರೋಪಿಸಿದ್ದಾರೆ.
ನದಿಯಿಂದ ಮರಳು ಸಂಗ್ರಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹೊರರಾಜ್ಯದ ಕಾರ್ಮಿಕರೇ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ.


