Thursday, November 5, 2026
Homeಪ್ರಮುಖ-ಸುದ್ದಿಹಾಲು, ಮೊಸರಿನ ಬೆನ್ನಲ್ಲೇ ನಂದಿನಿ ತುಪ್ಪ, ಬೆಣ್ಣೆ, ಪನೀರ್ ದರದಲ್ಲೂ ಭಾರಿ ಏರಿಕೆ

ಹಾಲು, ಮೊಸರಿನ ಬೆನ್ನಲ್ಲೇ ನಂದಿನಿ ತುಪ್ಪ, ಬೆಣ್ಣೆ, ಪನೀರ್ ದರದಲ್ಲೂ ಭಾರಿ ಏರಿಕೆ

- Advertisement -
- Advertisement -

ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಇದೀಗ, ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಉತ್ಪನ್ನಗಳ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ನವೆಂಬರ್ 4ರಿಂದಲೇ ಜಾರಿಗೆ ಬಂದಿವೆ.

ಈ ದರ ಏರಿಕೆಯಿಂದಾಗಿ ಮಧ್ಯಮ ವರ್ಗದ ಕುಟುಂಬಗಳ ಜೊತೆಗೆ ಹೋಟೆಲ್ ಉದ್ಯಮಿಗಳಿಗೂ ಹೆಚ್ಚುವರಿ ಹೊರೆ ಬೀಳಲಿದೆ. ನಂದಿನಿ ತುಪ್ಪದ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹135ರವರೆಗೆ ಹೆಚ್ಚಳ ಮಾಡಲಾಗಿದ್ದು, 1 ಲೀಟರ್ ಸ್ಯಾಚೆಟ್ ತುಪ್ಪದ ಬೆಲೆ ₹715ರಿಂದ ₹850ಕ್ಕೆ ಹಾಗೂ ಪೆಟ್ ಜಾರ್ ಬೆಲೆ ₹735ರಿಂದ ₹870ಕ್ಕೆ ಏರಿಕೆಯಾಗಿದೆ. 15 ಕೆಜಿ ಟಿನ್ ತುಪ್ಪದ ದರ ₹11,625ರಿಂದ ₹14,100ಕ್ಕೆ ತಲುಪಿದೆ. ಇನ್ನು 200 ಮಿ.ಲೀ ಸ್ಯಾಚೆಟ್ ತುಪ್ಪದ ಹೊಸ ದರ ₹95 ಆಗಿದೆ.

ನಂದಿನಿ ಬೆಣ್ಣೆಯ ದರದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. 500 ಗ್ರಾಂ ಉಪ್ಪಿಲ್ಲದ ಬೆಣ್ಣೆಯ ಬೆಲೆ ₹285ರಿಂದ ₹390ಕ್ಕೆ ಏರಿಕೆಯಾಗಿದೆ. 500 ಗ್ರಾಂ ಉಪ್ಪು ಸಹಿತ ಬೆಣ್ಣೆಯ ಹೊಸ ದರ ₹380 ಆಗಿದ್ದರೆ, 100 ಗ್ರಾಂ ಉಪ್ಪು ಸಹಿತ ಬೆಣ್ಣೆಗೆ ₹90 ಹಾಗೂ 200 ಗ್ರಾಂ ಉಪ್ಪಿಲ್ಲದ ಬೆಣ್ಣೆಗೆ ₹160 ನಿಗದಿಪಡಿಸಲಾಗಿದೆ. ಪನೀರ್ ಬೆಲೆಯಲ್ಲಿ ಪ್ರತಿ ಕೆಜಿಗೆ ₹77ರಷ್ಟು ಹೆಚ್ಚಳ ಮಾಡಲಾಗಿದ್ದು, 1 ಕೆಜಿ ಪನೀರ್ ಪ್ಯಾಕ್ ಬೆಲೆ ₹408ರಿಂದ ₹485ಕ್ಕೆ ಏರಿಕೆಯಾಗಿದೆ. 500 ಗ್ರಾಂ ಪ್ಯಾಕ್‌ಗೆ ₹260 ಹಾಗೂ 200 ಗ್ರಾಂ ಪ್ಯಾಕ್‌ಗೆ ₹115 ನಿಗದಿಪಡಿಸಲಾಗಿದೆ. ಇನ್ನು 200 ಗ್ರಾಂ ಮೀಡಿಯಂ ಫ್ಯಾಟ್ ಪನೀರ್‌ನ ಹೊಸ ದರ ₹110 ಆಗಿದೆ. ಇದರೊಂದಿಗೆ ತೃಪ್ತಿ ಹಾಲಿನ ದರದಲ್ಲೂ ಬದಲಾವಣೆ ಮಾಡಲಾಗಿದ್ದು, 135 ಎಂಎಲ್ ಪ್ಯಾಕ್‌ಗೆ ₹11 ಹಾಗೂ 450 ಎಂಎಲ್ ಪ್ಯಾಕ್‌ಗೆ ₹33 ನಿಗದಿಪಡಿಸಲಾಗಿದೆ. ಒಟ್ಟಿನಲ್ಲಿ, ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ದಿನನಿತ್ಯದ ಬಳಕೆಯ ವಸ್ತುಗಳ ಖರೀದಿಗೂ ಗ್ರಾಹಕರು ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಬ್ಬಗಳ ಬೆನ್ನಲ್ಲೇ ಕೆಎಂಎಫ್ ನೀಡಿರುವ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗಿದೆ.

- Advertisement -

Latest News

error: Content is protected !!