Saturday, October 17, 2026
Homeಕರಾವಳಿಕಾಸರಗೋಡುಕಾಸರಗೋಡು: ಬಾವಿಗೆ ಬಿದ್ದ ವೃದ್ಧೆ; ಜೀವದ ಹಂಗು ತೊರೆದು ರಕ್ಷಿಸಿದ ಆಟೋ ಚಾಲಕ

ಕಾಸರಗೋಡು: ಬಾವಿಗೆ ಬಿದ್ದ ವೃದ್ಧೆ; ಜೀವದ ಹಂಗು ತೊರೆದು ರಕ್ಷಿಸಿದ ಆಟೋ ಚಾಲಕ

- Advertisement -
- Advertisement -

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಬಾಳಾಲ್ ಪಂಚಾಯತ್ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ 16 ಅಡಿ ಆಳದ ಬಾವಿಗೆ ಬಿದ್ದ 62 ವರ್ಷದ ವೃದ್ಧೆಯೊಬ್ಬರ ಪ್ರಾಣವನ್ನು ಆಟೋ ಚಾಲಕನೊಬ್ಬ ತನ್ನ ಜೀವದ ಹಂಗು ತೊರೆದು ಸಾಹಸಿಕವಾಗಿ ಕಾಪಾಡಿರುವ ಹೃದಯವಿದ್ರಾವಕ ಹಾಗೂ ಮಾದರಿ ಘಟನೆ ವರದಿಯಾಗಿದೆ.

ಮಲ್ಲೋಮ್‌ನ ಆಟೋ ಚಾಲಕ ಪಪ್ಪಚ್ಚನ್ ಕೊನೂರ್ (55) ಸಾಹಸ ಮೆರೆದವರು. ಆಲ್ಝೈಮರ್ಸ್ ಕಾಯಿಲೆಯಿಂದ ಬಳಲುತ್ತಿರುವ ವಲಿಯಪರಂಬತ್ ಎಲಿಯಮ್ಮ (62) ರಕ್ಷಿಸಲ್ಪಟ್ಟವರು.

ಘಟನೆಯ ವಿವರ: ಗುರುವಾರ ಸಂಜೆ ಪಪ್ಪಚ್ಚನ್ ಅವರು ಎಲಿಯಮ್ಮ ಅವರ ಮನೆಗೆ ಫೋಟೋ ಫ್ರೇಮ್ ತಲುಪಿಸಲು ತೆರಳಿದ್ದರು. ಅದೇ ವೇಳೆ ಎಲಿಯಮ್ಮ ಬಾವಿಗೆ ಬಿದ್ದಿರುವ ವಿಷಯ ತಿಳಿದುಬಂದಿದೆ. ತಕ್ಷಣ ಅಲ್ಲಿಗೆ ಓಡಿದ ಪಪ್ಪಚ್ಚನ್, ಯೋಚಿಸದೆ ನೀರು ಎತ್ತುವ ಹಗ್ಗದ ಸಹಾಯದಿಂದ ನೇರವಾಗಿ ಬಾವಿಗೆ ಇಳಿದಿದ್ದಾರೆ. ಬಾವಿಯಲ್ಲಿ ನೀರು ತಲೆಯ ಮಟ್ಟದವರೆಗೆ ಇದ್ದುದ್ದರಿಂದ ನಿಂತುಕೊಳ್ಳಲು ಆಧಾರ ಸಿಕ್ಕಿರಲಿಲ್ಲ. ಆದರೂ ಎಲಿಯಮ್ಮ ಅವರ ತಲೆ ನೀರಿನಲ್ಲಿ ಮುಳುಗದಂತೆ ಪಪ್ಪಚ್ಚನ್ ಸುಮಾರು 50 ನಿಮಿಷಗಳ ಕಾಲ ಕೈಯಲ್ಲೇ ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದರು.

ಬಳಿಕ ಪಪ್ಪಚ್ಚನ್ ದೈಹಿಕವಾಗಿ ಬಳಲತೊಡಗಿದ್ದನ್ನು ಗಮನಿಸಿ, 60 ವರ್ಷದ ಕೂಲಿ ಕಾರ್ಮಿಕ ಮೋನಿ ಕೂಡ ಬಾವಿಗೆ ಇಳಿದು ಸಾಥ್ ನೀಡಿದರು. ಇಬ್ಬರೂ ಸೇರಿ ಮಹಿಳೆಯ ತಲೆಯನ್ನು ನೀರಿನ ಮೇಲೆಯೇ ಹಿಡಿದುಕೊಂಡಿದ್ದರು.

ಸ್ಥಳೀಯರ ಮಾಹಿತಿಯ ಮೇರೆಗೆ 33 ಕಿ.ಮೀ. ದೂರದಿಂದ ಚೀಮೇನಿ ಅಗ್ನಿಶಾಮಕ ಮತ್ತು ರಕ್ಷಣಾ ಘಟಕದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬಲೆಯಿರುವ ಬುಟ್ಟಿಯ ಮೂಲಕ ಮೊದಲು ಎಲಿಯಮ್ಮ ಅವರನ್ನು ಹಾಗೂ ಬಳಿಕ ಪಪ್ಪಚ್ಚನ್ ಮತ್ತು ಮೋನಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದರು.

ಆಸ್ಪತ್ರೆಗೆ ದಾಖಲಾಗಿರುವ ಎಲಿಯಮ್ಮ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿ ವಿನೀಶ್ ಕುಮಾರ್ ಕೆ. ತಿಳಿಸಿದ್ದಾರೆ. ರಕ್ಷಣಾ ಕಾರ್ಯದ ಸಮಯದಲ್ಲಿ ಪಪ್ಪಚ್ಚನ್ ಅವರ ಜೇಬಿನಲ್ಲಿದ್ದ ದಿನದ ದುಡಿಮೆಯ ಹಣ ಮತ್ತು ದಾಖಲೆಗಳು ನೆನೆದು ಹೋಗಿದ್ದರೂ, “ಹಣ ಹೋದಲ್ಲಿ ಮತ್ತೆ ಸಂಪಾದಿಸಬಹುದು, ಆದರೆ ಒಂದು ಜೀವ ಉಳಿದಿದೆಯಲ್ಲ” ಎಂಬ ಆಟೋ ಚಾಲಕನ ಮಾನವೀಯ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

- Advertisement -

Latest News

error: Content is protected !!