ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಬೆನ್ನಲ್ಲೇ, ಮಂಗಳೂರಿನ ‘ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ)’ ಆಡಳಿತ ಮಂಡಳಿಯು ಅಕ್ಟೋಬರ್ 19 ಹಾಗೂ 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮರುನಿಗದಿಪಡಿಸಿ ಸ್ಪಷ್ಟನೆ ನೀಡಿದೆ.
ಸರ್ಕಾರದ ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ, ಅನುಮೋದಿತ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 11ರಂದೇ ಕರಡು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದ್ದರೂ ಯಾವುದೇ ಮನವಿ ಬಾರದ ಕಾರಣ ಸೆಪ್ಟೆಂಬರ್ 26ರಂದು ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು ಎಂದು ಕಾಲೇಜು ತಿಳಿಸಿದೆ.
ಆದರೆ, ಅಕ್ಟೋಬರ್ 12ರ ಸೋಮವಾರದಂದು ಕಾಲೇಜು ಆಡಳಿತಕ್ಕೆ ಪೂರ್ವ ಮಾಹಿತಿ ನೀಡದೆ ಕೆಲವು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಯು ಪ್ರತಿಭಟನೆ ನಡೆಸಿದ್ದವು. ಸಂಸ್ಥೆಯ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲಾಗಿತ್ತು.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಾಲೇಜಿನಲ್ಲಿ ಸೌಹಾರ್ದಯುತ ವಾತಾವರಣ ಕಾಪಾಡುವ ನಿಟ್ಟಿನಲ್ಲಿ, ಅಕ್ಟೋಬರ್ 19 ಮತ್ತು 22ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಪರಿಷ್ಕೃತ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಅದೇ ರೀತಿ, ವಿದ್ಯಾರ್ಥಿಗಳ ನ್ಯಾಯಸಮ್ಮತ ಕಳವಳಗಳಿಗೆ ಸ್ಪಂದಿಸಲು ಸಂಸ್ಥೆ ಸದಾ ಮುಕ್ತವಾಗಿದೆ. ಆದರೆ ಆವರಣದಲ್ಲಿ ಅಶಿಸ್ತು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿ ಅಥವಾ ಶಾಂತಿಗೆ ಭಂಗ ತಂದಲ್ಲಿ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಸ್ಪಷ್ಟಪಡಿಸಿದೆ.


