ಮಂಗಳೂರು: ತಮ್ಮನ್ನು ಮುಂಬೈ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳದ (ATS) ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಸೈಬರ್ ವಂಚಕರ ಜಾಲವೊಂದು, ಪುತ್ತೂರು ತಾಲೂಕಿನ ನಿವಾಸಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಬೆದರಿಕೆಯೊಡ್ಡಿ ಬರೋಬ್ಬರಿ 1.31 ಕೋಟಿ ರೂಪಾಯಿ ವಂಚಿಸಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸೈಬರ್ ವಂಚಕರು ವಾಟ್ಸಾಪ್ ವಿಡಿಯೋ ಕರೆ ಮೂಲಕ ಪುತ್ತೂರಿನ ವ್ಯಕ್ತಿಯನ್ನು ಸಂಪರ್ಕಿಸಿ, ‘ಪಹಲ್ಗಾಮ್ ಹತ್ಯಾಕಾಂಡ’ದಲ್ಲಿ ಭಾಗಿಯಾದ ಉಗ್ರಗಾಮಿಗಳಿಗೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಗಂಭೀರ ಸುಳ್ಳು ಆರೋಪ ಹೊರಿಸಿದ್ದಾರೆ. ಅಲ್ಲದೆ, ತಕ್ಷಣವೇ ನಿಮ್ಮನ್ನು ಬಂಧಿಸಲಾಗುವುದು ಎಂದು ಭಯ ಹುಟ್ಟಿಸಿ, ನಿಮ್ಮ ಬ್ಯಾಂಕ್ ಖಾತೆಗಳು ತನಿಖೆಯಲ್ಲಿದ್ದು, ಪರಿಶೀಲನೆ ನಡೆಸಬೇಕಿದೆ ಎಂದು ನಂಬಿಸಿದ್ದಾರೆ.
ಖಾತೆ ಪರಿಶೀಲನೆಯ ನೆಪದಲ್ಲಿ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ರವಾನಿಸುವಂತೆ ಸೂಚಿಸಿದ್ದಾರೆ. ವಂಚಕರ ಮಾತುಗಳನ್ನು ನಂಬಿದ ಸಂತ್ರಸ್ತರು, ಕಳೆದ ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 6 ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಬರೋಬ್ಬರಿ 1,31,50,000 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ನಂತರ ಸಂಶಯಗೊಂಡು ಪರಿಶೀಲಿಸಿದಾಗ ತಾವು ಭಾರಿ ಸೈಬರ್ ಮೋಸಕ್ಕೆ ಒಳಗಾಗಿರುವುದು ಅರಿವಿಗೆ ಬಂದಿದ್ದು, ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಹಲವು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾಲದ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.
ಯಾವುದೇ ತನಿಖಾ ಸಂಸ್ಥೆ ಅಥವಾ ಪೊಲೀಸರು ವಿಡಿಯೋ ಕರೆ ಮೂಲಕ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ ಹಾಗೂ ಹಣ ವರ್ಗಾವಣೆಗೆ ಸೂಚಿಸುವುದಿಲ್ಲ. ಇಂತಹ ಅನುಮಾನಾಸ್ಪದ ಕರೆಗಳು ಬಂದಲ್ಲಿ ಸಾರ್ವಜನಿಕರು ಆತಂಕಗೊಳ್ಳದೆ ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.


