ಮಂಗಳೂರು: ಎಂಆರ್‌ಪಿಎಲ್ (MRPL) ಸಂಸ್ಥೆಯ ಘಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡದ ಬೆನ್ನಲ್ಲೇ, ಕರಾವಳಿಯುದ್ದಕ್ಕೂ ದೈವಿಕ ನಂಬಿಕೆ ಮತ್ತು ತಾಂತ್ರಿಕ ಲೋಪಗಳ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ.
ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ವ್ಯಾಪ್ತಿಯಲ್ಲಿರುವ 800 ವರ್ಷಗಳ ಇತಿಹಾಸ ಹೊಂದಿದ ಬಜಪೆಯ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವಸ್ಥಾನಕ್ಕೆ ಸಂಕ್ರಮಣದ ಪೂಜೆ ಹಾಗೂ ಪ್ರವೇಶಕ್ಕೆ ಎಂಆರ್‌ಪಿಎಲ್ ಹಾಗೂ ಎಂಎಸ್‌ಇಝಡ್ ಆಡಳಿತ ಮಂಡಳಿ ನಿರ್ಬಂಧ ವಿಧಿಸಿತ್ತು. ದೈವಸ್ಥಾನ ತೆರವು ಮತ್ತು ಪೂಜೆಗೆ ತಡೆ ನೀಡಿದ್ದಕ್ಕೆ ಕೋಪಗೊಂಡ ದೈವವು “ಸ್ಥಳ ಕೆಡವಲು ಬಂದರೆ ಬೆಂಕಿ ಸುರಿಸುತ್ತೇನೆ” ಎಂದು ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸ್ಫೋಟಕ್ಕೆ ದೈವದ ಕೋಪವೇ ಕಾರಣವೆಂದು ಸ್ಥಳೀಯ ದೈವಾರಾಧಕರು ನಂಬುತ್ತಿದ್ದಾರೆ.
ಅದೇ ಸಮಯದಲ್ಲಿ, ಕೈಗಾರಿಕಾ ಅವಘಡಕ್ಕೆ ಭದ್ರತಾ ಲೋಪ ಹಾಗೂ ತಾಂತ್ರಿಕ ದೋಷಗಳೇ ಮೂಲ ಕಾರಣವಾಗಿದ್ದು, ದೈವದ ನಂಬಿಕೆಯ ನೆಪದಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮುಚ್ಚಿಹೋಗಬಾರದು ಎಂಬ ಧ್ವನಿಯೂ ಕೇಳಿಬಂದಿದೆ. ಸ್ಥಳೀಯರು ದೈವಸ್ಥಾನಕ್ಕೆ ಮುಕ್ತ ಅವಕಾಶ ನೀಡುವಂತೆ ಪಟ್ಟು ಹಿಡಿಯುವುದರ ಜೊತೆಗೆ, ಸ್ಫೋಟದ ಕುರಿತು ನಿಖರ ತಾಂತ್ರಿಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.


