ಪುತ್ತೂರು: ಲಕ್ನೋದಿಂದ ಮುಂಬಯಿಗೆ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೃದಯಾಘಾತಕ್ಕೊಳಗಾಗಿದ್ದ ಮುಂಬಯಿ ಮೂಲದ ಪ್ರಯಾಣಿಕರೊಬ್ಬರಿಗೆ ಪುತ್ತೂರು ಈಶ್ವರಮಂಗಲದ ವೈದ್ಯ ಡಾ. ಶ್ರೀಕುಮಾರ್ ಕತ್ರಿಬೈಲು ಸಮಯಪ್ರಜ್ಞೆಯಿಂದ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ತಮ್ಮ ಕುಟುಂಬದೊಂದಿಗೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಡಾ. ಶ್ರೀಕುಮಾರ್, ವಿಮಾನದಲ್ಲಿದ್ದ ಪ್ರಯಾಣಿಕ ಮಂಜೇಶ್ (42) ಎಂಬುವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಾಗ ತಕ್ಷಣ ಸ್ಪಂದಿಸಿದ್ದಾರೆ. ವಿಮಾನದಲ್ಲಿದ್ದ ತುರ್ತು ಚಿಕಿತ್ಸಾ ಉಪಕರಣ ಬಳಸಿ ಆಮ್ಲಜನಕ, ಅಗತ್ಯ ಮಾತ್ರೆ ಹಾಗೂ ಸಿಪಿಆರ್ (CPR) ನೀಡುವ ಮೂಲಕ ಪ್ರಯಾಣಿಕ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.
ವಿಮಾನ ಮುಂಬಯಿ ತಲುಪುತ್ತಿದ್ದಂತೆ ಮಂಜೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತೀಯ ನೌಕಾದಳದ ಮಾಜಿ ಯೋಧರಾದ ಮಂಜೇಶ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಜೀವ ಉಳಿಸಿದ ಪುತ್ತೂರು ವೈದ್ಯರ ಕಾರ್ಯಕ್ಕೆ ಪ್ರಯಾಣಿಕರು ಹಾಗೂ ಇಂಡಿಗೋ ವಿಮಾನ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.


