ಸ್ಫೋಟದ ತೀವ್ರತೆಗೆ ಸಮೀಪದ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಹಾಗೂ ಸುತ್ತಮುತ್ತಲಿನ ಹಲವಾರು ಮನೆಗಳ ಕಿಟಕಿ ಗಾಜುಗಳು ಒಡೆದು ಚೂರುಚೂರಾಗಿವೆ. ಹಲವು ನಿವಾಸಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಬಜಪೆ, ಜೋಕಟ್ಟೆ, ಸುರತ್ಕಲ್ ಸೇರಿದಂತೆ ಸುತ್ತಮುತ್ತಲಿನ ಹಲವು ಕಿಲೋಮೀಟರ್ ಪ್ರದೇಶಗಳವರೆಗೆ ಈ ಭಯಾನಕ ಶಬ್ದ ಹಾಗೂ ಭೂಕಂಪನದ ಮಾದರಿಯ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಏಕಾಏಕಿ ಬಂದ ಸದ್ದಿನಿಂದ ಕಂಗಾಲಾದ ಸಾರ್ವಜನಿಕರು ಪ್ರಾಣಭಯದಿಂದ ಮನೆಗಳಿಂದ ಹೊರಗೆ ಓಡಿಬಂದರು.
ಈ ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. MRPL ಸಂಸ್ಥೆಯ ಒಳಗಿನ ತಾಂತ್ರಿಕ ದೋಷ ಅಥವಾ ಘಟಕದಲ್ಲಿ ಉಂಟಾದ ತೊಂದರೆಯೇ ಇದಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಹಾಗೂ ರಿಫೈನರಿ ತಾಂತ್ರಿಕ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಿಂದಾಗಿ ಉಂಟಾದ ಹಾನಿ ಮತ್ತು ಕಾರಣಗಳ ಕುರಿತು ಅಧಿಕೃತ ಪ್ರಕಟಣೆ ಇನ್ನೂ ಹೊರಬೀಳಬೇಕಿದ್ದು, ಸ್ಥಳೀಯರು ಸೂಕ್ತ ತನಿಖೆ ಹಾಗೂ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಂಆರ್ ಪಿಎಲ್ ಅಧಿಕಾರಿಗಳು ಸ್ಫೋಟದ ತೀವ್ರತೆಗೆ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬುವರಿಗೆ ಶೇ. 35 ರಷ್ಟು ಸುಟ್ಟ ಗಾಯಗಳಾಗಿವೆ. ತಕ್ಷಣವೇ ಅವರನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಘಟಕದ ಪಕ್ಕದಲ್ಲಿದ್ದ ಕಚೇರಿಯಲ್ಲಿದ್ದ ಮತ್ತೂ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ (OPD) ಸೂಕ್ತ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಮೊಕ್ಕಾಂ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (DC), ನಗರ ಪೊಲೀಸ್ ಕಮಿಷನರ್ (CP) ಹಾಗೂ MRPL ಸಿಇಒ (CEO) ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ತಿಳಿಸಿದೆ. ಘಟನೆಗೆ ನಿಖರ ಕಾರಣ ತಿಳಿಯಲು ತಾಂತ್ರಿಕ ಪರಿಶೀಲನೆ ಮುಂದುವರಿದಿದೆ ಎಂದಿದ್ದಾರೆ.


