ವಿನಾಶಕಾರಿ ಪ್ರವಾಹಕ್ಕೆ ತತ್ತರಿಸಿರುವ ನೇಪಾಳದಲ್ಲಿ ಮಾನವೀಯತೆ ಮರೆತ ದುಷ್ಕೃತ್ಯವೊಂದು ಬೆಳಕಿಗೆ ಬಂದಿದೆ. ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಉಂಟಾದ ಜಲಪ್ರಳಯದಿಂದ ನೂರಾರು ಜನರು ಜೀವ ಕಳೆದುಕೊಂಡಿದ್ದು, ಸಾವು-ನೋವಿನ ನಡುವೆಯೂ ಕೆಲವರು ಲೂಟಿಗೆ ಇಳಿದಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಬಂದಿದ್ದ ತಿಜೋರಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದ 29 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 10 ರಂದು ರಸುವಾ ಜಿಲ್ಲೆಯ ಭೋಟೆಕೋಶಿ ಪ್ರದೇಶದಲ್ಲಿ ಸಂಭವಿಸಿದ ಭಾರೀ ಪ್ರವಾಹಕ್ಕೆ ತಿಜೋರಿಯೊಂದು ಕೊಚ್ಚಿ ಹೋಗಿತ್ತು. ಬಳಿಕ ಇದು ಧಾಡಿಂಗ್ನ ಗಲ್ಚಿ ಗ್ರಾಮೀಣ ಪುರಸಭೆ-4ರ ಬೆಲ್ಲುಖೋಲಾ ಬಳಿಯ ತ್ರಿಶೂಲಿ ನದಿಯ ದಡದಲ್ಲಿ ಬಂದು ಬಿದ್ದಿತ್ತು.
ಸೆಪ್ಟೆಂಬರ್ 12 ರಂದು ಸ್ಥಳೀಯ ಕೆಲವರು ಸೇರಿ ಆ ತಿಜೋರಿಯನ್ನು ಒಡೆದು ಒಳಗಿದ್ದ ಹಣವನ್ನು ದೋಚಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಧಾಡಿಂಗ್ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 92,68,505 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ.


