ಮುಂಬೈ: ಹೊಸ ಮೊಬೈಲ್ ಫೋನ್ ಕೊಡಿಸಲಿಲ್ಲವೆಂಬ ಕೋಪಕ್ಕೆ ಬೆಟ್ಟದ ತುದಿಯೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಮಗ ಹಾಗೂ ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಬೆಟ್ಟದಿಂದ ಕೆಳಗೆ ಬಿದ್ದು ದುರಂತ ಅಂತ್ಯ ಕಂಡ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ನಗರದ ಜಲ್ತಾ ಫಾಟಾ ನಿವಾಸಿಗಳಾದ ಮುರಳೀಧರ್ ಚಾಂದ್ಗುಡೆ (48), ಅವರ ಪತ್ನಿ ಸಂಗೀತಾ ಮತ್ತು 18 ವರ್ಷದ ಪುತ್ರ ಕುನಾಲ್ ಮೃತಪಟ್ಟ ದುರದೃಷ್ಟಕರ ಪೋಷಕರು ಮತ್ತು ಮಗ.
ಪೊಲೀಸರ ಮಾಹಿತಿ ಪ್ರಕಾರ, ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹೊಸ ಮೊಬೈಲ್‌ಗಾಗಿ ಮನೆಯಲ್ಲಿ ಜಗಳವಾಡಿದ್ದ ಕುನಾಲ್, ಆಕ್ರೋಶದಿಂದ ಸಮೀಪದ ಬೆಟ್ಟದ ತುದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಗಾಬರಿಗೊಂಡ ಪೋಷಕರು, ಸ್ಥಳೀಯ ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಮೂರು ಗಂಟೆಗಳ ಕಾಲ ಆತನ ಮನವೊಲಿಸಲು ಹರಸಾಹಸ ಪಟ್ಟರು. ಕೆಳಭಾಗದಲ್ಲಿ ಸುರಕ್ಷತಾ ಬಲೆ ಅಳವಡಿಸಲು ಸಿಬ್ಬಂದಿ ಯತ್ನಿಸಿದರೂ, ಕುನಾಲ್ ತುದಿಯಲ್ಲಿ ಜಾಗ ಬದಲಾಯಿಸುತ್ತಾ ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದ.
ಮಧ್ಯಾಹ್ನ 1 ಗಂಟೆಯ ವೇಳೆಗೆ ಪರಿಸ್ಥಿತಿ ಮತ್ತಷ್ಟು ಕೈಮೀರಿತು. ಮಗನನ್ನು ಸಮಾಧಾನಪಡಿಸಲು ತಂದೆ ಮುರಳೀಧರ್ ಬೆಟ್ಟದ ತುದಿಗೆ ತೆರಳಿದರು. ಆದರೆ ಕುನಾಲ್ ಮತ್ತಷ್ಟು ಪ್ರಪಾತದ ಅಂಚಿಗೆ ಹೋಗಲು ಯತ್ನಿಸಿದಾಗ, ತಂದೆ ಆತನನ್ನು ಹಿಡಿದು ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ಇಬ್ಬರೂ ಪ್ರಪಾತಕ್ಕೆ ಬಿದ್ದಿದ್ದಾರೆ.
ಕಣ್ಣೆದುರೇ ಗಂಡ ಮತ್ತು ಮಗ ಬೆಟ್ಟದಿಂದ ಕೆಳಗೆ ಬೀಳುವುದನ್ನು ಕಂಡು ತೀವ್ರ ಆಘಾತಕ್ಕೊಳಗಾದ ತಾಯಿ ಸಂಗೀತಾ, ಮರುಕ್ಷಣವೇ ತಾನೂ ಬೆಟ್ಟದಿಂದ ಕೆಳಗೆ ಜಿಗಿದಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ಮೂವರ ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಕುಟುಂಬದ ಮೂವರು ಹೀಗೆ ಶೋಚನೀಯವಾಗಿ ಪ್ರಾಣ ಕಳೆದುಕೊಂಡಿರುವುದು ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.


