
ಬೆಂಗಳೂರು: ಮುಖ್ಯಮಂತ್ರಿಯಾಗಿ ಇಂದು ಮೊದಲ ಬಾರಿಗೆ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಡಿ.ಕೆ. ಶಿವಕುಮಾರ್ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿ ವ್ಯಕ್ತ ಪಡಿಸಿದ್ದಾರೆ.
ಎಲ್ಲಾ ಶಾಲೆಗಳಲ್ಲಿ 6ನೇ ತರಗತಿಯಿಂದ ಎಐ ಶಿಕ್ಷಣ ಪರಿಚಯ ಮಾಡುವುದಾಗಿ ಘೋಷಿಸಿರುವ ಸಿಎಂ,
ಎಐ ಅಕ್ಷರ ಅಭಿಯಾನ ಮತ್ತು ಕೋಡಿಂಗ್ ಗುರುಕುಲ ಆರಂಭಿಸುವುದಾಗಿ ಹೇಳಿದ್ದಾರೆ. ಅಲ್ಲದೇ
ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎಐ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವುದಾಗಿಯೂ ಪ್ರಕಟಿಸಿರುವ ಡಿ.ಕೆ. ಶಿವಕುಮಾರ್, ರಾಜ್ಯದ ವಿವಿಧೆಡೆ ಎಐ ಹಬ್ ಗಳನ್ನು ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ.
ಅಲ್ಲದೇ, ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ ಯೋಜನೆ ಆರಂಭಿಸುವುದಾಗಿ ಹೇಳಿರುವ ಸಿಎಂ, ಮುಂದಿನ ಆರು ತಿಂಗಳಲ್ಲಿ ಎಲ್ಲಾ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವುದಾಗಿ ತಿಳಿದಿದ್ದಾರೆ. ಯುವಕರಿಗಾಗಿ ಯುವ ಉದ್ಯೋಗ ಸೇತು ಯೋಜನೆ ಮತ್ತು ಉದ್ಯೋಗ ನಿಧಿ ಯೋಜನೆ ಮೂಲಕ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಭರವಸೆ ನೀಡಿದ್ದಾರೆ.
ಪ್ರತಿ ಹೊಸ ಉದ್ಯೋಗಕ್ಕೆ ತಿಂಗಳಿಗೆ 2,500 ರೂಪಾಯಿ ಪ್ರೋತ್ಸಾಹ ಧನ, ರೈತರಿಗಾಗಿ ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, ಸಣ್ಣ ರೈತರಿಗಾಗಿ ರೈತ ಮಿತ್ರ ಕಾರ್ಯಕ್ರಮ, 3 ಎಕರೆ ಅಥವಾ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಶುಲ್ಕದಲ್ಲಿ 50% ಸಹಾಯಧನ, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಸಹಾಯ ಹಸ್ತ ಯೋಜನೆ, ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಲ್ಲಿ 7.5% ಮೀಸಲಾತಿ, ರಾಜ್ಯದ ಪ್ರತಿಯೊಂದು ಪಟ್ಟಣ ಮತ್ತು ನಗರದಲ್ಲಿ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಅಭಿವೃದ್ಧಿ ಮತ್ತು ವಾಹನ ಮಾಲೀಕರಿಗೆ ಸರಳ ವಿಮಾ ಸೇವೆಗಾಗಿ ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪನೆ ಬಗ್ಗೆಯೂ ಭಾಷಣದಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ.


