Tuesday, November 17, 2026
Homeಕರಾವಳಿಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ; ಟೇಕಾಫ್ ವೇಳೆ ಇಂಡಿಗೋ ವಿಮಾನದ ತಳಭಾಗದಲ್ಲಿ ಬೆಂಕಿ...

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ; ಟೇಕಾಫ್ ವೇಳೆ ಇಂಡಿಗೋ ವಿಮಾನದ ತಳಭಾಗದಲ್ಲಿ ಬೆಂಕಿ ಕಿಡಿ, ಚಕ್ರ ಸ್ಫೋಟ!; ನೂರಾರು ದೇವಸ್ಥಾನಗಳ ಬ್ರಹ್ಮಕಲಶ ಸೇವೆಯ ಪುಣ್ಯವೇ ನಮ್ಮನ್ನು ಕಾಪಾಡಿದೆ: ನಳಿನ್ ಕುಮಾರ್ ಕಟೀಲು

- Advertisement -
- Advertisement -

ಮಂಗಳೂರು:ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್‌ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ಕೊನೆಯ ಕ್ಷಣದಲ್ಲಿ ತಪ್ಪಿದೆ. ಬೆಂಗಳೂರಿಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಟೇಕ್‌ಆಫ್‌ಗೆ ಕೆಲವೇ ಕ್ಷಣಗಳಿರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ತಕ್ಷಣ ಬ್ರೇಕ್ ಹಾಕಿ ವಿಮಾನವನ್ನು ರನ್‌ವೇಯಲ್ಲೇ ನಿಲ್ಲಿಸಿದ್ದಾರೆ. ಇದರಿಂದ ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.

ಸೋಮವಾರ (ನ.16) ಸಂಜೆ 6.10ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ ರನ್‌ವೇಯಲ್ಲಿ ವೇಗವಾಗಿ ಚಲಿಸುತ್ತಿತ್ತು. ಟೇಕ್‌ಆಫ್‌ಗೆ ಇನ್ನು ಕೇವಲ 100 ಮೀಟರ್ ಅಂತರವಿರುವಾಗ ವಿಮಾನದ ತಳಭಾಗದಲ್ಲಿ ಬೆಂಕಿಯ ಕಿಡಿ ಹಾಗೂ ಸ್ಪಾರ್ಕ್ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ವಿಮಾನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿಮಾನದ ಒಂದು ಚಕ್ರ ಒಡೆದಿರುವುದಾಗಿ ತಿಳಿದುಬಂದಿದೆ.

ಘಟನೆಯ ಬಳಿಕ ವಿಮಾನವನ್ನು ಸುರಕ್ಷಿತವಾಗಿ ನಿಲ್ದಾಣದ ಬೇ ಪ್ರದೇಶಕ್ಕೆ ವಾಪಸ್ ತರಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಇಂಡಿಗೋ ಸಂಸ್ಥೆಯವರು ಅಗತ್ಯ ನೆರವು ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಬಳಿಕ ಪ್ರಯಾಣಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿ, ರಾತ್ರಿ 11.30ಕ್ಕೆ ಬದಲಿ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.

ವಿಮಾನದಲ್ಲಿದ್ದರು ಹಲವು ಗಣ್ಯರು

ಈ ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಮಂಜುಳಾ ಎಸ್. ಅರವಿಂದ ಲಿಂಬಾವಳಿ ಹಾಗೂ ಹೈಕೋರ್ಟ್ ನ್ಯಾಯಾಧೀಶರಾದ ರಾಜೇಶ್ ರೈ ಸೇರಿದಂತೆ ಹಲವು ಗಣ್ಯರು ಪ್ರಯಾಣಿಸುತ್ತಿದ್ದರು. ಅಲ್ಲದೆ, ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ ಪ್ರಯಾಣಿಕರೂ ವಿಮಾನದಲ್ಲಿದ್ದರು ಎಂದು ತಿಳಿದುಬಂದಿದೆ.

ಇನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಎಮರ್ಜೆನ್ಸಿ ಬಾಗಿಲಿನ ಹತ್ತಿರವೇ ಸೀಟ್ ಬುಕ್ ಮಾಡಿದ್ದು, ಈ ಅವಘಡದ ಬಗ್ಗೆ ತಮ್ಮ ಆಪ್ತರಲ್ಲಿ “ನೂರಾರು ದೇವಸ್ಥಾನಗಳ ಬ್ರಹ್ಮಕಲಶ ನಡೆಸಿದ ಪುಣ್ಯ ಕಾರ್ಯದಲ್ಲಿ ಭಾಗಿಯಾದ ಪುಣ್ಯವೇ ನಮ್ಮನ್ನು ಉಳಿಸಿತು” ಎಂದು ಹೇಳಿಕೊಂಡಿದ್ದಾರೆ.

ಪೈಲಟ್ ಸಮಯಪ್ರಜ್ಞೆಗೆ ಪ್ರಯಾಣಿಕರ ಮೆಚ್ಚುಗೆ

ಟೇಕ್‌ಆಫ್‌ಗೆ ಕೆಲವೇ ಕ್ಷಣಗಳಿರುವಾಗ ವಿಮಾನವನ್ನು ನಿಲ್ಲಿಸಿದ ಪೈಲಟ್‌ನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಕ್ಷಣ ಬ್ರೇಕ್ ಹಾಕದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕೂಡ ಪೈಲಟ್‌ನ ಸಮಯಪ್ರಜ್ಞೆಯಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆಯಿಂದ ಕೆಲಕಾಲ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಎಲ್ಲರೂ ಸುರಕ್ಷಿತವಾಗಿ ಪಾರಾಗಿರುವುದು ಸಮಾಧಾನ ತಂದಿದೆ.

- Advertisement -

Latest News

error: Content is protected !!