
ಮಧುರೈ: ಪ್ರೇಯಸಿಯ ಆರ್ಥಿಕ ಸಂಕಷ್ಟವನ್ನು ನೀಗಿಸಲು ಯುವಕನೊಬ್ಬ ತಮಿಳುನಾಡಿನ ಮಧುರೈನಲ್ಲಿರುವ ಪ್ರತಿಷ್ಠಿತ ‘ತನಿಷ್ಕ್’ ಜ್ಯುವೆಲ್ಲರಿ ಶೋರೂಮ್‌ಗೆ ನುಗ್ಗಿ ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ದೋಚಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಆದ ಪ್ರೇಯಸಿ ಹಾಗೂ ಆರೋಪಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 11ರ ರಾತ್ರಿ ಮಧುರೈ ಬೈಪಾಸ್ ರಸ್ತೆಯಲ್ಲಿರುವ ಹೊಸ ತನಿಷ್ಕ್ ಶೋರೂಮ್‌ನ ಲಿಫ್ಟ್ ನಿರ್ಮಾಣದ ಸಣ್ಣ ಓಪನಿಂಗ್ ಮೂಲಕ ಒಳನುಗ್ಗಿದ ಮುಸುಕುಧಾರಿ ನಿಶಾಂತ್, 10.5 ಕೆಜಿ ಚಿನ್ನ ಮತ್ತು 1 ಕೆಜಿ ವಜ್ರ ಸೇರಿದಂತೆ ಒಟ್ಟು 11 ಕೆಜಿ ಆಭರಣಗಳನ್ನು ಕಳವು ಮಾಡಿದ್ದ. ನವೆಂಬರ್ 12ರ ಬೆಳಗ್ಗೆ ಶೋರೂಮ್ ಸಿಬ್ಬಂದಿ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಆರೋಪಿಯ ದೇಹದ ಮೇಲಿದ್ದ ‘ಟ್ಯಾಟೂ’ ಸುಳಿವು ಆಧರಿಸಿ ತನಿಖೆ ನಡೆಸಿದ ಎಸ್‌ಎಸ್ ಕಾಲೋನಿ ಪೊಲೀಸರು, ಶೋರೂಮ್ ಪಕ್ಕದಲ್ಲೇ ವಾಸವಿದ್ದ ನಿಶಾಂತ್ ಈ ಕೃತ್ಯ ಎಸಗிருப்பPಪಿನ ಬಗ್ಗೆ ಪತ್ತೆ ಹಚ್ಚಿದ್ದಾರೆ. ತೀವ್ರ ಸಾಲ ಹಾಗೂ ಆರ್ಥಿಕ ಸಂಕಷ್ಟದಲ್ಲಿದ್ದ ತನ್ನ ಪ್ರೇಯಸಿ, ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಎಂ. ಮೀನಾಕ್ಷಿ (22) ಅವಳಿಗಾಗಿ ನಿಶಾಂತ್ ಈ ದರೋಡೆಗೆ ಸ್ಕೆಚ್ ಹಾಕಿದ್ದ. ಕಳ್ಳತನಕ್ಕೆ ಮೀನಾಕ್ಷಿ ತನ್ನ ದ್ವಿಚಕ್ರ ವಾಹನ ನೀಡಿ ನೆರವಾಗಿದ್ದರೆ, ಸಾಕ್ಷ್ಯ ನಾಶಪಡಿಸಲು ನಿಶಾಂತ್ ತಂದೆ ವಿ. ಸುರೇಶ್ (53) ಸಾಥ್ ನೀಡಿದ್ದರು.
ಮಡಕುಳಂ ಕೆರೆಯ ನಿರ್ಜನ ಪ್ರದೇಶದಲ್ಲಿ ಹೂತಿಟ್ಟಿದ್ದ 5 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ನಿಶಾಂತ್‌ಗಾಗಿ ಮತ್ತು ಉಳಿದ ಚಿನ್ನಾಭರಣಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ಶೋಧ ಮುಂದುವರಿಸಿದೆ.


