
ಬೆಳ್ತಂಗಡಿ : ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಕಳೆದ ಐದು ವರ್ಷಗಳಿಂದ ಹಾಜರಾಗದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ರಾಷ್ಟ್ರೀಯ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯದ ಸಿ.ಸಿ. ನಂ. 797/2017 ಹಾಗೂ ಅಪರಾಧ ಸಂಖ್ಯೆ 65/2017 ಕಲಂ 395, 397 ಹಾಗೂ 34 ಐಪಿಸಿ ಯಲ್ಲಿ ಸುಮಾರು 5 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಕರಣದ ಮೂರನೇ ವಾರಂಟ್ ಆರೋಪಿ ಬೆಂಗಳೂರು ಈಶ್ವರ ನಗರ ನಿವಾಸಿ ದೇವಪ್ಪ ಮಗ ಮೂರ್ತಿ @ ಪಿಂಟು (37) ಎಂಬಾತನನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ನೇತೃತ್ವದ ತಂಡದ ಸಿಬ್ಬಂದಿ ವೃಷಭ ಮತ್ತು ಚರಣ್ ರಾಜ್ ಅವರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಆ.4 ರಂದು ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿ ಕರೆದುಕೊಂಡು ಬಂದು ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆ.5 ರಂದು ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಇಬ್ಬರ ಬಂಧನ ಬಾಕಿ: ರೆಖ್ಯ ರಾಷ್ಟ್ರೀಯ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಮಾಯಕೃಷ್ಣ@ ಮಂಗ್ಯಾನ್, ಮಣಿಕಂಠ, ಮೂರ್ತಿ@ ಪಿಂಟು, ಪ್ರಭ@ಪ್ರಭು, ಕುರಲ್ ಅರಸನ್,ನಂಜುಂಡ ಭಾಗಿಯಾಗಿದ್ದು ಇದರಲ್ಲಿ ನಾಲ್ಕು ಮಂದಿಯನ್ನು ಧರ್ಮಸ್ಥಳ ಪೊಲೀಸರು ಈ ಮೊದಲು ನ್ಯಾಯಾಲಯಕ್ಕೆ ಹಾಜರಾಗದ ಕಾರಣದಿಂದ ವಾರಂಟ್ ಜಾರಿ ಮಾಡಿದ ಬಳಿಕ ಹಲವು ವರ್ಷದ ಬಳಿಕ ಬಂಧಿಸಿದ್ದರು.ನಾಲ್ಕನೇ ಆರೋಪಿ ಪ್ರಭ @ ಪ್ರಭು ಎಂಬಾತ ಜೆ.ಪಿ.ನಗರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪರಪ್ಪನ ಜೈಲಿನಲ್ಲಿ ಬಂಧಿಯಾಗಿದ್ದು, ಈತನನ್ನು ಧರ್ಮಸ್ಥಳ ಪೊಲೀಸರು ಬಾಡಿ ವಾರಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಐದನೇ ಆರೋಪಿ ಕುರಲ್ ಅರಸನ್ ಮಾತ್ರ ಇನ್ನೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಬೆಳ್ತಂಗಡಿ ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ರೋಹಿಣಿ ಸಿ.ಕೆ ಮತ್ತು ಪೊಲೀಸ್ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಉಪ ನಿರೀಕ್ಷಕರಾದ ಸಮರ್ಥ್ ಆರ್ ಗಾಣಿಗೇರ ನೇತೃತ್ವದ ಸಿಬ್ಬಂದಿಗಳಾದ ವೃಷಭ ಮತ್ತು ಚರಣ್ ರಾಜ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


