
ಬಂಟ್ವಾಳ: ಇತ್ತೀಚೆಗೆ ಬರಿಮಾರ್ ಎಂಬಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ಮಗುವೊಂದು ಮೃತಪಟ್ಟು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದ ದುರಂತ ಘಟನೆಗೆ ಸಂಬಂಧಿಸಿದಂತೆ, ಶಾಲಾ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 22 ರಂದು ನಡೆದ ಈ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (RTO) ವಾಹನದ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಘಟನೆಯ ಸಮಯದಲ್ಲಿ ಸದ್ರಿ ಶಾಲಾ ವಾಹನದ ವಿಮೆ (Insurance) ಹಾಗೂ ಅರ್ಹತಾ ಪತ್ರ (Fitness Certificate) ಚಾಲ್ತಿಯಲ್ಲಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ, ಈ ವಾಹನವು ಶ್ರೀರಾಮ ವಿದ್ಯಾಕೇಂದ್ರದ ಹೆಸರಿನಲ್ಲಿ ನೋಂದಣಿಯಾಗದೆ ಬೇರೊಂದು ಟ್ರಸ್ಟ್‌ನ ಮಾಲಕತ್ವದಲ್ಲಿದೆ ಎಂಬುದು ತಿಳಿದುಬಂದಿದೆ.
ಸೂಕ್ತ ದಾಖಲೆಗಳಿಲ್ಲದೆ, ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ಬೇಜವಾಬ್ದಾರಿಯಿಂದ ವಾಹನ ಚಲಾಯಿಸಲು ಕಾರಣರಾದ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (ಅ.ಕ್ರ: 109/2026) ಬಿಎನ್‌ಎಸ್ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


