
ಚಿಕ್ಕಮಗಳೂರು; ಹಣದ ವಿಚಾರವಾಗಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಉಂಟಾದ ಜಗಳ ತಾರಕಕ್ಕೇರಿ, ಮಾಲೀಕ ನಡೆಸಿದ ಮಿಸ್ ಫೈರಿಂಗ್ ಮಗುವಿಗೆ ತಾಗಿ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿಯಲ್ಲಿ ನಡೆದಿದೆ.
ಬಾಳೆಹಳ್ಳಿಯ ತೋಟದ ಮಾಲೀಕ ಜಗದೀಶ್ ಗೌಡ ಎಂಬುವರ ಬಳಿ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನಕ್ಕೆ 400 ರೂಪಾಯಿ ಕೂಲಿ ನೀಡುವಂತೆ ಕಾರ್ಮಿಕರು ಪಟ್ಟು ಹಿಡಿದರೆ, ಮಾಲೀಕ ಜಗದೀಶ್ 350 ರೂಪಾಯಿ ಕೊಟ್ಟು ಬಾಕಿ 50 ರೂಪಾಯಿಯನ್ನು ಆಮೇಲೆ ನೀಡುವುದಾಗಿ ಹೇಳಿದ್ದರು.ಇದಕ್ಕೆ ಒಪ್ಪದ ಕಾರ್ಮಿಕರು ಕೆಲಸ ತೊರೆದು ಹೊರಡಲು ಸಜ್ಜಾಗಿದ್ದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಕೂಡಲೇ ಕಾರ್ಮಿಕರನ್ನು ಬೆದರಿಸಲು ಮಾಲೀಕ ಜಗದೀಶ್ ಗೌಡ ಬಂದೂಕು ಹೊರತೆಗೆದಿದ್ದು, ಈ ವೇಳೆ ಆಕಸ್ಮಿಕವಾಗಿ ಮಿಸ್ ಫೈರ್ ಆಗಿದೆ! ದುರದೃಷ್ಟವಶಾತ್, ಆ ಗುಂಡು ಅಲ್ಲೇ ನಿಂತಿದ್ದ ಅಪ್ರಾಪ್ತ ಮಗುವಿನ ತಲೆಗೆ ತಾಗಿ ಗಂಭೀರವಾಗಿ ಗಾಯಗೊಂಡಿದೆ.ರಕ್ತದ ಮಡುವಿನಲ್ಲಿದ್ದ ಮಗುವನ್ನು ತಕ್ಷಣ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


