Sunday, July 5, 2026
Homeಕರಾವಳಿಮಂಗಳೂರು ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರಿನ ಯುವಕ ದುರಂತ ಅಂತ್ಯ: ನಾಲ್ವರು ಸ್ನೇಹಿತರು ಪೊಲೀಸ್ ಕಸ್ಟಡಿಗೆ

 ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರಿನ ಯುವಕ ದುರಂತ ಅಂತ್ಯ: ನಾಲ್ವರು ಸ್ನೇಹಿತರು ಪೊಲೀಸ್ ಕಸ್ಟಡಿಗೆ

- Advertisement -
- Advertisement -

ಮಂಗಳೂರು: ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರು ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಚಾರಣ ಮುಗಿಸಿ ವಿಹಾರದಲ್ಲಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಲೀಪ್‌ಜಿಗ್ ಪ್ರಾಂತ್ಯದಲ್ಲಿ ನಡೆದಿದೆ.

ಮಂಗಳೂರಿನ ಮರಕಡ-ಕುಂಜತ್‌ಬೈಲ್ ನಿವಾಸಿ ಮೊಹಮ್ಮದ್ ಅನಿಜ್‌ ಅಬೂಬಕ್ಕರ್ (21) ಮೃತಪಟ್ಟ ದುರ್ದೈವಿ. ಈತ ಜರ್ಮನಿಯ ಹಾಲೆಯ ರಹ್ನ್ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎ (BBA) ಮೂರನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸದ್ಯ ಘಟನೆಗೆ ಸಂಬಂಧಿಸಿದಂತೆ ಜರ್ಮನಿಯ ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೃತನ ಜೊತೆಯಲ್ಲಿದ್ದ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಹಾಗೂ ರಾಯಭಾರ ಕಚೇರಿಯ ಮೂಲಗಳ ಪ್ರಕಾರ, ಜುಲೈ 2 ಗುರುವಾರ ಬೆಳಗ್ಗೆ ಅನಿಜ್ ತನ್ನ ಸಹಪಾಠಿಗಳೊಂದಿಗೆ ಸೇರಿ ಲೀಪ್‌ಜಿಗ್ ಪ್ರಾಂತ್ಯದ ಬಳಿ ಟ್ರಕ್ಕಿಂಗ್ ಮಾಡಲು ಹೊರಟಿದ್ದ. ಚಾರಣ ಮುಗಿದ ಬಳಿಕ ಈತ ಹಾಗೂ ಸ್ನೇಹಿತರು ಜೊತೆಗೂಡಿ ಲೀಪ್‌ಜಿಗ್‌ನ ‘ರೆಡ್ ಬುಲ್ ಅರೆನಾ’ ಕ್ರೀಡಾಂಗಣದ ಬಳಿ ನೀರಿನಲ್ಲಿ ಆಡಲು ತೆರಳಿದ್ದರು. ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾಗ ಹಠಾತ್ ಆಗಿ ಅನಿಜ್ ನಾಪತ್ತೆಯಾಗಿದ್ದಾನೆ.

ಆತ ಕಾಣೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಆತಂಕಗೊಂಡ ಸ್ನೇಹಿತರು ಲ್ಯಾಂಡೌರ್ ಸೇತುವೆ ಪ್ರದೇಶದ ತುರ್ತು ಸೇವೆಗಳ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಜರ್ಮನಿಯ ವಿಪತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಭರ್ಜರಿ ಶೋಧ ಕಾರ್ಯ ನಡೆಸಿ, ನೀರಿನಲ್ಲಿ ಮುಳುಗಿದ್ದ ಅನಿಜ್‌ನ ಶವವನ್ನು ಹೊರತೆಗೆದಿವೆ.

ಮೃತ ಅನಿಜ್ ತಂದೆ ಮರಕಡ ಅಬೂಬಕ್ಕರ್ ಸಿದ್ದಿಕ್ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. ಮಗನ ಸಾವಿನ ಸುದ್ದಿಯಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ. ಸದ್ಯ ಕುಟುಂಬದ ಪರ ವಕೀಲರಾದ ಪಿ.ಎ. ಹಮೀದ್ ಪಡುಬಿದ್ರಿ ಅವರು ಬರ್ಲಿನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅನಿಜ್ ಅವರ ಪಾರ್ಥೀವ ಶರೀರವನ್ನು ಶೀಘ್ರವಾಗಿ ಮಂಗಳೂರಿಗೆ ತರಲು ಅಗತ್ಯವಿರುವ ಎಲ್ಲಾ ಅಂತರರಾಷ್ಟ್ರೀಯ ತಾಂತ್ರಿಕ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಪ್ರಯತ್ನಗಳು ಸಾಗಿವೆ.

- Advertisement -

Latest News

error: Content is protected !!