
ಉಡುಪಿ:: ಬ್ರಹ್ಮಾವರದ ಸ್ಥಳೀಯ ಬಸ್ ನಿಲ್ದಾಣದಿಂದ ದಲಿತ ಸಮುದಾಯದ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿ, ಕೇರಳದಲ್ಲಿ ಬಲವಂತವಾಗಿ ಕೆಲಸಕ್ಕೆ ದೂಡಿ, ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಭೇದಿಸಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ವಾರಂಬಳ್ಳಿ ಗ್ರಾಮದ ಸಾಲಿಕೇರಿ ನಿವಾಸಿ ವಿಖ್ಯಾತ್ ಆಚಾರ್ಯ (19) ಹಾಗೂ ಮಟಪಾಡಿ ನಿವಾಸಿ ಸುಚಿತ್ ನಾಯಕ್ (20) ಬಂಧಿತ ಆರೋಪಿಗಳು. ಕಾನೂನು ಸಂಘರ್ಷಕ್ಕೆ ಒಳಗಾದ ಮತ್ತೊಬ್ಬ ಬಾಲಕನನ್ನು ಬಾಲ ನ್ಯಾಯಮಂಡಳಿ (JJB) ಮುಂದೆ ಹಾಜರುಪಡಿಸಲಾಗಿದೆ.
ಘಟನೆಯ ವಿವರ: ಜೂನ್ 1ರಂದು ಬ್ರಹ್ಮಾವರ ಬಸ್ ನಿಲ್ದಾಣದಲ್ಲಿದ್ದ ಅಪ್ರಾಪ್ತ ಬಾಲಕನನ್ನು ಆರೋಪಿಗಳು ಬಲವಂತವಾಗಿ ಅಪಹರಿಸಿ, ಕೇರಳದ ತಲಪಾಡಿ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿಸಿದ್ದರು. ಬಾಲಕನು ತನಗೆ ಕೆಲಸ ಬೇಡ, ಮನೆಗೆ ಹೋಗುತ್ತೇನೆ ಎಂದಿದ್ದಕ್ಕೆ ಕೋಪಗೊಂಡ ಆರೋಪಿಗಳು, ಜೂನ್ 9ರಂದು ಆತನನ್ನು ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದಾರೆ. ಆರೋಪಿ ಸುಚಿತ್ ನಾಯಕ್ ವಿದ್ಯುತ್ ವಯರ್‌ನಿಂದ ಬಾಲಕನಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದರೆ, ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಇಡೀ ಕ್ರೌರ್ಯವನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಮತ್ತೊಬ್ಬ ಬಾಲಕ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.
ಬಾಲಕನ ಪೋಷಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023)ಯ ಅಪಹರಣ, ಹಲ್ಲೆ, ಜೀವ ಬೆದರಿಕೆ ಸೆಕ್ಷನ್‌ಗಳು ಸೇರಿದಂತೆ ಮಕ್ಕಳ ರಕ್ಷಣಾ ಕಾಯ್ದೆ (JJ Act) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


