Wednesday, June 3, 2026
Homeಕರಾವಳಿಉಡುಪಿಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ;...

ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ; ಮೂವರು ಕುಖ್ಯಾತ ಅಂತರ್ ರಾಜ್ಯ ಕಳ್ಳರ ಬಂಧನ

- Advertisement -
- Advertisement -

ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನ್ನೈ ಪೆರೂರು ಮೂಲದ, ಪ್ರಸ್ತುತ ಕೇರಳದ ಕಾಸರಗೋಡು ಜಿಲ್ಲೆಯ ಚರ್ಕಳ ಮುಟ್ಟತ್ತೋಡಿ ಚೆರಿಯಾಲಂಬಾಡಿ ನಿವಾಸಿ ಕಾಸರಗೋಡು ರಮ್ದೀನ್ ಸಲೀಂ, ಮೂಡಬಿದ್ರೆಯ ಮಿಜಾರು ಗ್ರಾಮದ ಹರೀಶ್ ಶೆಟ್ಟಿ ಮತ್ತು ಕಾಸರಗೋಡು ಜಿಲ್ಲೆಯ ನೆಕ್ರಜೆ ಗ್ರಾಮದ ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಸಫ್ವಾನ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತನಗರದ ಎಸ್‌ಆರ್‌ಎಸ್ ಶಾಲೆ ಬಳಿಯ ನಿವಾಸಿ ಕೀರ್ತನ ಪ್ರಭು ಎಂಬುವವರ ಮನೆಯಲ್ಲಿ ಮೇ 24ರಂದು ನಡೆದಿದ್ದ ಭಾರಿ ಕಳ್ಳತನ ನಡೆದಿತ್ತು. ಪ್ರಕರಣ ಬೇಧಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಖದೀಮರಿಂದ ಪೊಲೀಸರು ₹37,87,800 ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಮತ್ತು ಕಳ್ಳತನಕ್ಕೆ ಬಳಸಲಾಗಿದ್ದ ₹4 ಲಕ್ಷ ಮೌಲ್ಯದ ಕಾರನ್ನು ಜಪ್ತಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯಿಂದ ಇನ್ನಷ್ಟು ಕಳವು ಮಾಲುಗಳನ್ನು ವಶಪಡಿಸಿಕೊಳ್ಳಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಕೀರ್ತನ ಪ್ರಭು ಅವರ ಮನೆಯಿಂದ ₹49.42 ಲಕ್ಷ ಮೌಲ್ಯದ ಚಿನ್ನಾಭರಣ, ₹3.95 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ ₹6.60 ಲಕ್ಷ ಮೌಲ್ಯದ ಚಿನ್ನದ ಹೊದಿಕೆಯುಳ್ಳ ವಜ್ರದ ಒಡವೆಗಳು ಸೇರಿದಂತೆ ಒಟ್ಟು ₹59,77,000 ಮೌಲ್ಯದ ಸೊತ್ತನ್ನು ದೋಚಿ ಪರಾರಿಯಾಗಿದ್ದರು.

ಬಂಧಿತ ಆರೋಪಿಗಳು ಹಳೆಯ ಸರಣಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ರಮ್ದೀನ್ ಸಲೀಂ 2013ರಲ್ಲಿ ಇಡೀ ರಾಜ್ಯವನ್ನೇ ನಡುಗಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವ್ಯಾಪ್ತಿಯ ಉದ್ಯಮಿ ಆರ್.ಎನ್. ನಾಯಕ್ ಕೊಲೆ ಪ್ರಕರಣ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತನಾಗಿದ್ದಾನೆ. ಇನ್ನೊಬ್ಬ ಆರೋಪಿ ಹರೀಶ್ ಶೆಟ್ಟಿ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಕೊಲೆ ಯತ್ನ, ಮಾದಕ ದ್ರವ್ಯ ಸೇವನೆ ಹಾಗೂ ಸುರತ್ಕಲ್ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ. ಹೆಬ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this:

- Advertisement -

Latest News

error: Content is protected !!