ಉಡುಪಿ: ಲಾರಿ ಮತ್ತು ಗೂಡ್ಸ್ ಟೆಂಪೋ ಮಧ್ಯೆ ಭೀಕರ ಅಪಘಾತ ಸಂಭವಿಸಿ ಟೆಂಪೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ
ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮೂಲ್ಕಿ ಬಳಿ ಭಾನುವಾರ ನಸುಕಿನ ಜಾವ ನಡೆದಿದೆ. ಶಿವಮೊಗ್ಗ ಮೂಲದ ಪ್ರಶಾಂತ್ ಪಿ. (29) ಮೃತ ದುರ್ದೈವಿ,.
ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಸರಕು ಸಾಗಾಟದ ಲಾರಿಗೆ, ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಟೆಂಪೋ ಹಿಂದಿನಿಂದ ಬಂದು ರಭಸವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಟೆಂಪೋದ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಢಿಕ್ಕಿಯ ರಭಸಕ್ಕೆ ಚಾಲಕ ಪ್ರಶಾಂತ್ ಅವರ ಮೃತದೇಹ ಟೆಂಪೋದ ಕ್ಯಾಬಿನ್ ಒಳಗಡೆಯೇ ಸಿಲುಕಿಕೊಂಡಿತ್ತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಉಡುಪಿ ಸಂಚಾರ ಠಾಣೆಯ ಪೊಲೀಸರು ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರ ಕಾರ್ಯಾಚರಣೆ ನಡೆಸಿ, ಅತ್ಯಂತ ಸಾಹಸದ ಬಳಿಕ ಮೃತದೇಹವನ್ನು ಹೊರತೆಗೆದರು.
ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


