ಬಂಟ್ವಾಳ ; ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ಮಾಡಿದ ಮೂವರನ್ನು RPF ಸಿಬ್ಬಂದಿ ವಶಕ್ಕೆ ಪಡೆದ ಘಟನೆ ಬಂಟ್ವಾಳ ರೈಲು ನಿಲ್ದಾಣದಲ್ಲಿ ನಡೆದಿದೆ.
ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 56626ರ ಕೊನೆಯ ಬೋಗಿಯಲ್ಲಿ ಈ ಘಟನೆ ನಡೆದಿದೆ. ಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ಹತ್ತಿದ್ದ ಮೂವರು ವ್ಯಕ್ತಿಗಳು, ಚಲಿಸುವ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ತಕ್ಷಣವೇ ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಆರ್‌ಪಿಎಫ್ ಸಿಬ್ಬಂದಿ, ರೈಲು ಬಂಟ್ವಾಳ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ರೈಲನ್ನು ಕೆಲ ನಿಮಿಷಗಳ ಕಾಲ ಬಂಟ್ವಾಳ ನಿಲ್ದಾಣದಲ್ಲೇ ನಿಲ್ಲಿಸಲಾಗಿತ್ತು. ಬಳಿಕ ಬೋಗಿಗೆ ತೆರಳಿದ ಭದ್ರತಾ ಸಿಬ್ಬಂದಿ, ಗಲಾಟೆ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ಕೆಳಕ್ಕಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ರೈಲು ಎಂದಿನಂತೆ ಮಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಸದ್ಯ ಆರ್‌ಪಿಎಫ್ ಪೊಲೀಸರು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶದಲ್ಲಿಟ್ಟುಕೊಂಡಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


