ಬೆಂಗಳೂರು:ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ಹೈಕಮಾಂಡ್‌ನವರು ನನಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಅವರು ರಾಜೀನಾಮೆ ಕೊಡಿ ಎಂದು ಹೇಳಿದ ತಕ್ಷಣ, ನಾನು ನಾಡಿದ್ದು (ಇಂದು) ಕೊಡುತ್ತೇನೆ ಎಂದು ತಿಳಿಸಿದ್ದೆ. ಅದರಂತೆಯೇ ನಾನು ಇಂದು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೆ, ಹೈಕಮಾಂಡ್ ಯಾವಾಗ ಸೂಚನೆ ನೀಡುತ್ತದೆಯೋ ಆಗ ನಾನು ರಾಜೀನಾಮೆ ಕೊಡುತ್ತೇನೆ ಎಂದು. ಈಗ ಅದರಂತೆಯೇ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ರಾಜೀನಾಮೆ ಪ್ರಕ್ರಿಯೆಯ ಬಗ್ಗೆ ವಿವರಿಸಿದ ಅವರು, “ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ರಾಜ್ಯಪಾಲರು ಸದ್ಯ ಊರಿನಲ್ಲಿ ಇಲ್ಲ, ಅವರು ಇಂದು ರಾತ್ರಿ ವಾಪಸ್ ಬರುತ್ತಾರೆ ಎಂದು ಅಲ್ಲಿನ ಕಚೇರಿಯಲ್ಲಿ ತಿಳಿಸಿದರು. ಹಾಗಾಗಿ, ನನ್ನ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಸಲ್ಲಿಸಿ ಬಂದಿದ್ದೇನೆ. ರಾಜ್ಯಪಾಲರು ಬಂದ ಮೇಲೆ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸಂವಿಧಾನದ ಪ್ರಕಾರ ಅವರು ಪ್ರಕ್ರಿಯೆ ನಡೆಸಬೇಕಾಗುತ್ತದೆ” ಎಂದರು.


