ಉಡುಪಿ: ನಿರ್ಮಾಣ ಹಂತದ ಬಾವಿ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಲ್ಪೆ ಕೊಡವೂರು ಸಮೀಪದ ಉದ್ದಿನಹಿತ್ಲು ಎಂಬಲ್ಲಿ ನಡೆದಿದೆ. ಕೊಪ್ಪಳ ಮೂಲದ ಯುವ ಕಾರ್ಮಿಕ ರಮೇಶ್ (25) ಮೃತ ಕಾರ್ಮಿಕ. ಸತತ 7 ಗಂಟೆಗಳ ಜಂಟಿ ಕಾರ್ಯಾಚರಣೆಯ ಬಳಿಕ ಮಧ್ಯರಾತ್ರಿ ವೇಳೆ ರಮೇಶ್ ಮೃತದೇಹ ಪತ್ತೆಯಾಗಿದೆ.
ಮಧ್ವನಗರ ನಿವಾಸಿ ಚೇತನ್ ಎಂಬವರ ಜಾಗದಲ್ಲಿ ಹೊಸದಾಗಿ ಬಾವಿ ನಿರ್ಮಾಣ ಮಾಡುವ ಕಾಮಗಾರಿಯನ್ನು ಕಾರ್ಕಳ ಸಾಣೂರು ನಿವಾಸಿ ಪ್ರಭಾತ್ ಶೆಟ್ಟಿ ಎಂಬವರು ವಹಿಸಿಕೊಂಡಿದ್ದರು. ಈ ಕೆಲಸಕ್ಕಾಗಿ ಅವರು ಕೊಪ್ಪಳ ಜಿಲ್ಲೆಯ ಐದು ಜನ ಕೂಲಿ ಕಾರ್ಮಿಕರನ್ನು ಮೇ 21ರಂದು ಕಾರ್ಕಳದಿಂದ ಕರೆತಂದಿದ್ದರು. ಮೇ 22ರ ಶುಕ್ರವಾರದಂದು ಕಾರ್ಮಿಕರು ಎಂದಿನಂತೆ ಬಾವಿಯಿಂದ ಮಣ್ಣು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರು.
ಸಂಜೆ 5 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬಿಡುವ ಸಮಯದಲ್ಲಿ, ರಮೇಶ್ ಅವರು ಬಾವಿಯ ತಳಭಾಗದಲ್ಲಿ ಮಣ್ಣು ತೆಗೆಯುತ್ತಿದ್ದರು. ಈ ವೇಳೆ ಬಾವಿಯ ದಂಡೆಯ ಮೇಲ್ಭಾಗದ ಮಣ್ಣು ಒಮ್ಮೆಲೆ ಭಾರಿ ಪ್ರಮಾಣದಲ್ಲಿ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ರಮೇಶ್ ಸಂಪೂರ್ಣವಾಗಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಾವಿಯಲ್ಲಿದ್ದ ಇನ್ನೋರ್ವ ಕಾರ್ಮಿಕ ತಕ್ಷಣವೇ ಜಾಣ್ಮೆಯಿಂದ ಮೇಲಕ್ಕೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಲ್ಪೆ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಜೆಸಿಬಿ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಐದು ಅಡಿ ಆಳದಲ್ಲಿ ಕಾರ್ಮಿಕ ಸಿಲುಕಿಕೊಂಡಿದ್ದರು. ಆದರೆ, ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪದೇ ಪದೇ ಮಣ್ಣು ಕುಸಿಯುತ್ತಿದ್ದುದರಿಂದ ಮೃತದೇಹ ಹೊರತೆಗೆಯಲು ಭಾರಿ ಅಡ್ಡಿಯುಂಟಾಯಿತು. ಕೊನೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸತತ 7 ಗಂಟೆಗಳ ಹರಸಾಹಸದ ಬಳಿಕ ಮಧ್ಯರಾತ್ರಿ ವೇಳೆ ರಮೇಶ್ ಅವರ ಶವವನ್ನು ಮಣ್ಣಿನಿಂದ ಹೊರತೆಗೆಯಲಾಯಿತು. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


