ಬೆಳ್ತಂಗಡಿ : ಕೆರೆ ಪರಂಬೋಕು ಜಾಗದಲ್ಲಿ 94 ಸಿ ಭೂಮಿ ಮಂಜೂರಾತಿ ನಿಯಮಗಳಿಗೆ ಬಾಹಿರವಾಗಿ ಸುಳ್ಳು ಮಾಹಿತಿ ನೀಡಿ ಮಂಜೂರಾತಿ ಪಡೆದುಕೊಂಡ ಬಗ್ಗೆ ದೂರಿನ ಆಧಾರದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ತನಿಖೆ ನಡೆಸಿ 94ಸಿ ಹಕ್ಕುಪತ್ರವನ್ನು ರದ್ದುಪಡಿಸಿ ಆದೇಶ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು
ಗ್ರಾಮದ ಸ.ನಂ.11/4 ರಲ್ಲಿ 0.04 ಎಕ್ರರೆ ಜಾಗವಾದ ಶೆಣೈ ರೆಸ್ಟೋರೆಂಟ್ ಪಕ್ಕದಲ್ಲಿ ಹರೀಶ್ ಶೆಣೈ ಎಂಬವರು 24-11-2015 ರಲ್ಲಿ ಕಾನೂನು ಬಾಹಿರವಾಗಿ ಬಡವರಿಗೆ ಸಿಗುವ ನಿವೇಶನ ಜಾಗಕ್ಕಾಗಿ ಕೆರೆ ಪಕ್ಕದ ಪರಂಬೋಕು ಜಾಗದಲ್ಲಿ 94 ಸಿ ಮಂಜೂರು ಮಾಡಿಸಿಕೊಂಡಿದ್ದರು. ಬಳಿಕ ಕಳೆದ ಆರು ವರ್ಷಗಳಿಂದ ಶೆಣೈ ರೆಸ್ಟೋರೆಂಟ್ ಮಾಲೀಕ ಪ್ರಕಾಶ್ ಶೆಣೈ ಅವರಿಗೆ ಮಾರಾಟ ಮಾಡಿ ಹೋಗಿದ್ದರು. ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಗೆ ದಾಖಲೆ ಸಮೇತ ದೂರು ಹೋದ ಮೇರೆಗೆ ತನಿಖೆ ನಡೆಸಿ 22-04-2026 ರಂದು ಹರೀಶ್ ಶೆಣೈ ಪರವಾಗಿ ತಾಯಿ ಶಾರದಾ ಶೆಣೈ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿ ವಾಸ್ತವ್ಯ ಇಲ್ಲದೆ ಇರುವುದರ ಬಗ್ಗೆ ಮಾಹಿತಿಯನ್ನು ಲಿಖಿತವಾಗಿ ನೀಡಿದ್ದರು.

ಈ ಬಗ್ಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಕರ್ನಾಟಕ ಭೂ ಮಂಜೂರಾತಿ ನಿಯಮವಳಿಗೆ ಬಾಹಿರವಾಗಿ ಸುಳ್ಳು ಮಾಹಿತಿ ನೀಡಿ ಪರಂಬೋಕು ಜಾಗದಲ್ಲಿ 94 ಸಿ ಮಂಜೂರಾತಿ ಪಡೆದುಕೊಂಡಿರುವ ಕುವೆಟ್ಟು ಗ್ರಾಮದ ಸ.ನಂ.11/4 ರಲ್ಲಿ 0.04 ಎಕ್ರರೆ ಮನೆ ಅಡಿಸ್ಥಳದ ಹಕ್ಕುಪತ್ರವನ್ನು ರದ್ದು ಪಡಿಸಿ 28-04-2026 ರಂದು ಆದೇಶ ಹೊರಡಿಸಿದ್ದಾರೆ.

94C ಮಂಜೂರಾದ ಜಾಗದಲ್ಲಿ ಶೌಚಾಲಯ ನಿರ್ಮಾಣ: 94 ಸಿ ಮಂಜೂರಾದ ಜಾಗದಲ್ಲಿ ಶೆಣೈ ರೆಸ್ಟೋರೆಂಟ್ ಮಾಲೀಕ ಪ್ರಕಾಶ್ ಶೆಣೈ ಎಂಬವರು ಹೊಸ ಶೌಚಾಲಯ ನಿರ್ಮಾಣ ಮಾಡಿದ್ದಾರೆ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ.
ಹೊಸ ವಾಣಿಜ್ಯ ಕಟ್ಟಡ ಕೂಡ ಅಕ್ರಮ: ಪ್ರಕಾಶ್ ಶೆಣೈ ಮಾಲೀಕತ್ವದ ಹಳೆ ಶೆಣೈ ರೆಸ್ಟೋರೆಂಟ್ ಹಿಂಭಾಗದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ವಾಣಿಜ್ಯ ಕಟ್ಟಡ ಕೂಡ ಯಾವುದೇ ದಾಖಲೆ ಇಲ್ಲದೆ ಅನಧಿಕೃತ ಮತ್ತು ಅಕ್ರಮವಾಗಿ ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಡ ದೂರುಗಳು ಹೋಗಿರುವುದರಿಂದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಮುಂದೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.



