ಪುತ್ತೂರು; ಸ್ನ್ಯಾಪ್ ಚಾಟ್ ನಲ್ಲಿ ಯುವತಿಯ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.ನಿವಾಸಿಯಾದ ಸಂತ್ರಸ್ತರಿಗೆ ಕಳೆದ 2025 ರ ಡಿಸೆಂಬರ್ ತಿಂಗಳಿನಲ್ಲಿ ಸ್ನ್ಯಾಪ್‌ಚಾಟ್ ಆ್ಯಪ್‌ನಲ್ಲಿ ‘annapornagowd26’ ಎಂಬ ಐಡಿಯಿಂದ ಮೆಸೇಜ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ತಾನು ‘ಅನ್ನಪೂರ್ಣ ಗೌಡ’ ಎಂಬ ಹುಡುಗಿ ಎಂದು ಸುಳ್ಳು ಪರಿಚಯ ಮಾಡಿಕೊಂಡಿದ್ದಲ್ಲದೆ, ತಾನು ಬೆಂಗಳೂರಿನ ಪ್ರಸಿದ್ಧ ‘ವಿಪ್ರೋ’ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾನೆ.
ಕೆಲವೇ ದಿನಗಳಲ್ಲಿ ಸಂತ್ರಸ್ತನ ನಂಬಿಕೆ ಗಳಿಸಿದ ಆ ಅಪರಿಚಿತ, ತನ್ನ ವಾಟ್ಸಾಪ್ ನಂಬರ್ ಹಂಚಿಕೊಂಡಿದ್ದಾನೆ. ಅಂದಿನಿಂದ ಇಬ್ಬರೂ ವಾಟ್ಸಾಪ್ ಮೂಲಕ ನಿರಂತರ ಚಾಟಿಂಗ್ ಹಾಗೂ ಮಾತುಕತೆ ಮುಂದುವರಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, 2026 ರ ಫೆಬ್ರವರಿ ತಿಂಗಳಿನಿಂದ ಏಪ್ರಿಲ್ ತಿಂಗಳ ನಡುವಿನ ಅವಧಿಯಲ್ಲಿ ತನಗೆ ತೀವ್ರ ಹಣಕಾಸಿನ ತೊಂದರೆ ಎದುರಾಗಿದೆ ಎಂದು ಹಲವು ಕಟ್ಟುಕಥೆಗಳನ್ನು ಹೇಳಿ ಸಂತ್ರಸ್ತನಿಂದ ಹಂತ ಹಂತವಾಗಿ ಒಟ್ಟು 4,84,203/- ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ಹಣ ಪಡೆದ ಬಳಿಕ ಆಕೆ ವಾಪಸ್ ನೀಡದೆ ಸತಾಯಿಸಿದಾಗ ಸಂತ್ರಸ್ತನಿಗೆ ಸಂಶಯ ಬಂದಿದೆ. ಈ ಬಗ್ಗೆ ಅವರು ತನ್ನ ಆಪ್ತ ಗೆಳೆಯರ ಬಳಿ ವಿಷಯ ತಿಳಿಸಿ, ಆ ಸ್ನ್ಯಾಪ್‌ಚಾಟ್ ಐಡಿ ಹಾಗೂ ವಾಟ್ಸಾಪ್ ಖಾತೆಯ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗ ತಾನು ಇಷ್ಟು ದಿನ ಪ್ರೀತಿಯಿಂದ ಮಾತನಾಡಿದ್ದು ಮತ್ತು ಹಣ ನೀಡಿದ್ದು ಹುಡುಗಿಗಲ್ಲ, ಬದಲಿಗೆ ಹುಡುಗಿಯ ಹೆಸರಿನಲ್ಲಿ ಅಕೌಂಟ್ ತೆರೆದಿದ್ದ ಒಬ್ಬ ಹುಡುಗನಿಗೆ ಎಂಬ ಅಸಲಿ ಸತ್ಯ ಬಯಲಾಗಿದೆ. ತನ್ನನ್ನು ಹುಡುಗಿ ಎಂದು ನಂಬಿಸಿ, ಮೆಸೇಜ್ ಮೂಲಕ ಪುಸಲಾಯಿಸಿ ಲಕ್ಷಾಂತರ ರೂಪಾಯಿ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಎಸಗಿರುವ ವಂಚಕನ ವಿರುದ್ಧ ಸಂತ್ರಸ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


