ಮೂಡುಬಿದಿರೆ: ನೆಲ್ಲಿಕಾರು–ಕಾರ್ಕಳ ಮುಖ್ಯ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.ಗೂಡ್ಸ್ ಟೆಂಪೋ ಕಾರ್ಕಳ ಕಡೆಯಿಂದ ಹೊಸ್ಮಾರು ಕಡೆಗೆ ಸಾಗುತ್ತಿದ್ದು ಹಾಗೂ ಹೊಸ್ಮಾರು ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿದ್ದು, ಢಿಕ್ಕಿಯ ತೀವ್ರತೆಗೆ ಕಾರು ಮತ್ತು ಗೂಡ್ಸ್ ಟೆಂಪೋ ಎರಡೂ ಗಂಭೀರವಾಗಿ ಜಖಂಗೊಂಡಿವೆ ಎನ್ನಲಾಗಿದೆ.
ಅಪಘಾತಕ್ಕೊಳಗಾದ ಗೂಡ್ಸ್ ಟೆಂಪೋದಲ್ಲಿ ಕಾರ್ಕಳ ಕಡೆಯಿಂದ ಮನೆ ಖಾಲಿ ಮಾಡಿ ಸಾಮಗ್ರಿಗಳನ್ನು ಸ್ಥಳಾಂತರಿಸಲು ತೆರಳುತ್ತಿದ್ದ ಕುಟುಂಬ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗೂಡ್ಸ್ ಟೆಂಪೋ ಚಾಲಕ ಕೃಷ್ಣರಾಜ್, ಕಾರು ಚಾಲಕ ಲಲಿತೇಶ್ ಗೌಡ ಹಾಗೂ ಬಾಲಕ ಪ್ರವೀಣ್ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


